ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ: '75 ವರ್ಷ ತುಂಬಿದೆ ಎಂದು ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿಯ ಪಾಪಿಗಳು ಈಗ ಪ್ರಧಾನಮಂತ್ರಿ ಸ್ಥಾನದ ವಿಚಾರದಲ್ಲೂ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಆಶಯದಂತೆ ನಡೆದುಕೊಳ್ಳಲಿ' ಎಂದು ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂಬ ಮೋಹನ್ ಭಾಗವತ್ ಅವರ ನಿಲುವನ್ನು ಸ್ವಾಗತಿಸುತ್ತೇನೆ' ಎಂದರು.
'ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗೆ ಇಳಿದರೆ ಅವರ ಸ್ಥಾನಕ್ಕೆ ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಕ್ತ ಆಯ್ಕೆ. ಗಡ್ಕರಿ ಅವರಿಗೆ ದೇಶದ ಜನಸಾಮಾನ್ಯರ ಬಗ್ಗೆ ಹೆಚ್ಚು ಕಾಳಜಿ ಇದೆ. 'ದೇಶದಲ್ಲಿ ಬಡವರ ಸಂಖ್ಯೆ ಹೆಚ್ವುತ್ತಿದೆ. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ದೇಶದ ಸಂಪತ್ತು ಕೆಲವೇ ಜನರ ಪಾಲಾಗುತ್ತಿದೆ' ಎಂದು ಗಡ್ಕರಿ ಅವರು ಈಚೆಗೆ ನೀಡಿದ್ದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಪ್ರಧಾನಮಂತ್ರಿ ಸ್ಥಾನಕ್ಕೆ ಅವರೇ ಅರ್ಹರು. ಆ. ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಚಿಂತಿಸಲಿ' ಎಂದು ಸಲಹೆ ನೀಡಿದರು.
"ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಸಮಾರಂಭಕ್ಕೆ ಕ್ಷೇತ್ರದ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರನ್ನು ಆಹ್ವಾನಿಸದೇ ಅಪಮಾನ ಮಾಡಲಾಗಿದೆ. ಆದರೂ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುವೆ' ಎಂದರು.
'ಸೇತುವೆ ನಿರ್ಮಾಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಇದೆ ನಿಜ. ಆಗ ಶಾಸಕನಾಗಿದ್ದ ನನ್ನ ಪತ್ರ ಪಡೆದೇ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಬಜೆಟ್ ನಲ್ಲಿ ₹100 ಕೋಟಿ ಮೀಸಲಿಟ್ಟಿದ್ದರು. ಹಾಗೆಂದು ಕೇಂದ್ರ ಸರ್ಕಾರ ನಿರ್ಮಿಸಿದ ಸೇತುವೆಯನ್ನು ತಾವೇ ನಿರ್ಮಿಸಿದವರಂತೆ ಪ್ರಚಾರ ಪಡೆಯುತ್ತಿರುವುದು ಸಲ್ಲ. ಅದರ. ಬದಲಿಗೆ ಸಿಗಂದೂರು ಸೇತುವೆ ಬಳಿ ಬಿಜೆಪಿಯವರು ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರತಿಮೆ ನಿರ್ಮಿಸಿಬಿಡಲಿ' ಎಂದು ಛೇಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.