ADVERTISEMENT

‘ತೆನೆ’ ಬಿಟ್ಟು ‘ಕೈ’ ತೆಕ್ಕೆಗೆ ಬೆಮೆಲ್ ಕಾಂತರಾಜು: ಪಕ್ಷ ಸೇರ್ಪಡೆ ನಾಳೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 11:49 IST
Last Updated 20 ಜನವರಿ 2022, 11:49 IST
   

ಬೆಂಗಳೂರು: ಜೆಡಿಎಸ್‌ ಮುಖಂಡ, ವಿಧಾನಪರಿಷತ್‌ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರು ಶುಕ್ರವಾರ ಕಾಂಗ್ರೆಸ್‌ ಸೇರಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಕೋವಿಡ್‌ ನಿರ್ಬಂಧಗಳು ಜಾರಿಯಲ್ಲಿ ಇರುವುದರಿಂದ ಕಾಂತರಾಜು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಯಾರೂ ಬರಬಾರದು‘ ಎಂದು ಮನವಿ ಮಾಡಿದ್ದಾರೆ.

‘ಜವಾಬ್ದಾರಿಯುತ ಪಕ್ಷದ ಪ್ರತಿನಿಧಿಗಳಾಗಿ ಕೋವಿಡ್‌ ನಿಯಮಗಳ ಪಾಲನೆ ನಮ್ಮೆಲ್ಲರ ಕರ್ತವ್ಯ. ಕಾರ್ಯಕರ್ತರು ಹಾಗೂ ಜನರ ಆರೋಗ್ಯದ ಹಿತದೃಷ್ಟಿಯಿಂದ ನನ್ನ ಮನವಿಗೆ ಸ್ಪಂದಿಸಬೇಕು. ಆಹ್ವಾನಿತ ಮುಖಂಡರನ್ನು ಹೊರತುಪಡಿಸಿ ಬೇರೆ ಯಾರೂ ಕಾರ್ಯಕ್ರಮಕ್ಕೆ ಬರಬಾರದು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತುರುವೇಕೆರೆ ಕ್ಷೇತ್ರದಿಂದ ಕಣಕ್ಕೆ: ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬೆಮೆಲ್ ಕಾಂತರಾಜು, ಕೆಲವು ತಿಂಗಳಿನಿಂದ ಜೆಡಿಎಸ್​​​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ, ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷ ಸೇರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಅವರು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಇತ್ತೀಚೆಗೆ ಬಂದಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ಬೆಮೆಲ್ ಕಾಂತರಾಜು ಯಾರು?’ ಎಂದು ಆಕ್ರೋಶಭರಿತವಾಗಿ ಮಾತನಾಡಿದ್ದರು. ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಬೆಮೆಲ್ ಕಾಂತರಾಜು, ‘ನಾನು ಜೆಡಿಎಸ್ ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಹೀಗಿದ್ದರೂ ಕುಮಾರಸ್ವಾಮಿಯವರು ನನ್ನನ್ನು ಯಾರು ಎಂದು ಹೇಳಿರುವುದು ಬೇಸರ ತರಿಸಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.