ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ಕಡಲೆ ಬೆಳೆಯುವ ರೈತರ ಸಂಕಷ್ಟವನ್ನು ಪರಿಗಣಿಸಿ, ಕೂಡಲೇ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಮಾಹಿತಿಯನ್ನು ಅವರು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
‘ಕರ್ನಾಟಕದಲ್ಲಿ ಕಡಲೆ ಬೆಳೆಯುವ ರೈತರು ಎದುರಿಸುತ್ತಿರುವ ತೀವ್ರ ಬಿಕ್ಕಟ್ಟನ್ನು ಎತ್ತಿ ತೋರಿಸಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದೇನೆ. ಕ್ವಿಂಟಲ್ ಕಡಲೆ ಕಾಳಿಗೆ ₹5,875 ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಇದೆ. ಆದರೆ, ಮಾರುಕಟ್ಟೆ ಬೆಲೆಗಳು ಎಂಎಸ್‌ಪಿಗಿಂತ ತೀರಾ ಕಡಿಮೆಯಾಗಿದ್ದು, ರೈತರು ಮಾರಾಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆದಾಯವನ್ನು ರಕ್ಷಿಸಲು ಮತ್ತು ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಬೆಲೆ ಬೆಂಬಲ ಯೋಜನೆ(ಪಿಎಸ್‌ಎಸ್) ಅಡಿಯಲ್ಲಿ ಖರೀದಿಯನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ನಾನು ಕೇಂದ್ರವನ್ನು ಒತ್ತಾಯಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಕಡಲೆಯು ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು 9.24 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತದೆ. ಅಂದಾಜು 6.27 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತದೆ. ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ರೈತರು ಕಡಲೆ ಬೆಳೆಯುತ್ತಾರೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಅನಿಶ್ಚಿತ ಹವಾಮಾನ ಪರಿಸ್ಥಿತಿಗಳಲ್ಲಿ ತಿಂಗಳುಗಳ ಕಠಿಣ ಪರಿಶ್ರಮದ ನಂತರ ಕಡಲೆ ಕೊಯ್ಲು ಆದಾಯದ ಏಕೈಕ ಮೂಲವಾಗಿದೆ. ಆದಾಗ್ಯೂ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆತಂಕಕಾರಿ ಮಾರುಕಟ್ಟೆ ಪರಿಸ್ಥಿತಿಯ ಬಗ್ಗೆ ತುರ್ತು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.