ಬೆಂಗಳೂರು: ‘ಆನ್‌ಲೈನ್‌ನಲ್ಲಿ ಗ್ರಾಮ ಪಂಚಾಯಿತಿ ಸಭೆಗಳನ್ನು ನಡೆಸುವುದಕ್ಕೆ ಸರ್ಕಾರ ಶೀಘ್ರವೇ ಚಾಲನೆ ನೀಡಲಿದೆ’ ಎಂದು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಬೆಂಗಳೂರು ಟೆಕ್ ಶೃಂಗದಲ್ಲಿ ‘ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ’ ಕುರಿತು ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನವು ಆಡಳಿತದ ಭಾಗವಾಗಿದೆ. ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಆದಾಯ ಹೆಚ್ಚಳಕ್ಕೂ ನೆರವಾಗಿದೆ ಎಂದು ಹೇಳಿದರು.ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್‌ಕಾಯ್ದೆ 1993ರ ಅನ್ವಯ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆ,ವಾರ್ಡ್ ಸಭೆ, ವಿಶೇಷ ಸಭೆ, ಸ್ಥಾಯಿ ಸಮಿತಿ ಸಭೆ, ಸಮಿತಿ ಹಾಗೂ ಉಪ ಸಮಿತಿ ಸಭೆ, ಕೆಡಿಪಿ ಸಭೆ ಆಯೋ ಜಿಸುವುದು ಕಡ್ಡಾಯ. ಈ ಎಲ್ಲಾ ಸಭೆಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೆಲವು ಬಾರಿ ಸಭೆ ನಡೆದಿದೆಯೇ ಅಥವಾ ಎಷ್ಟು ಸದಸ್ಯರು ಹಾಜರಾಗಿದ್ದಾರೆ ಎಂಬುದು ತಿಳಿಯುವುದಿಲ್ಲ. ಆನ್‌ಲೈನ್ ಸಭೆಗಳಿಂದ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಸಭೆಯ ಆಗುಹೋಗುಗಳ ಮೇಲೆ ನಿಗಾ ಇಡಬಹುದು. ಜನರಿಗೂ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳ ಬಗ್ಗೆ ತಿಳಿಯಲಿದೆ. ಇದರಿಂದ ಆಡಳಿತದಲ್ಲಿ ಸುಧಾರಣೆ ತರಲು ಸಹಕಾರಿಯಾಗಲಿದೆ ಎಂದರು. ರಾಜ್ಯ ಸರ್ಕಾರವು ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರು ಮತ್ತು ಸಿಬ್ಬಂದಿಯ ಹಾಜರಾತಿ, ಸಭಾ ನಡಾವಳಿಗಳನ್ನು ಡಿಜಿಟಲ್ ಸಾಧನದ ಮೂಲಕ ತಯಾರಿಸಿ ಅಧ್ಯಕ್ಷರ ಡಿಜಿಟಲ್ ಸಹಿಯೊಂದಿಗೆ ಅನುಮೋದನೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಪಂಚತಂತ್ರ 2.0 ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ವಿವರಿಸಿದರು.
ಕೆಲವು ಇಲಾಖೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗಿದೆ. ಸರ್ಕಾರದ ದತ್ತಾಂಶಗಳ ಬಗ್ಗೆ ಅನಕ್ಷರಸ್ಥರಿಗೆ ಮಾಹಿತಿ ಇರುವುದಿಲ್ಲ. ಎ.ಐ ವಿಡಿಯೊಗಳ ಮೂಲಕ ಈ ದತ್ತಾಂಶ ಕುರಿತು ಅವರಿಗೆ ಅರಿವು ಮೂಡಿಸಲು ಪ್ರಯತ್ನ ಮಾಡಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.