ADVERTISEMENT

ವಿಮಾನ ನಿಲ್ದಾಣ: ಕೋವಿಡ್ ಪರೀಕ್ಷೆ ಮುಂದುವರಿಕೆಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 21:45 IST
Last Updated 22 ಫೆಬ್ರುವರಿ 2023, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಪ್ರಕರಣ ನಿಯಂತ್ರಣಕ್ಕೆ ಬಂದರೂ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮುಂದುವರಿಸಿ, ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನಾ ವಿಶ್ಲೇಷಣೆಗೆ (ಜೀನೋಮ್‌ ಸೀಕ್ವೆನ್ಸಿಂಗ್‌) ಒಳಪಡಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಇತ್ತೀಚೆಗೆ ಯಾವುದೇ ಹೊಸ ರೂಪಾಂತರಿ ವೈರಾಣು ಪತ್ತೆಯಾಗಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಸೋಂಕು ದೃಢ ಪ್ರಮಾಣ ದರ ಸಹ ಶೇ 5ರ ಗಡಿ ದಾಟಿಲ್ಲ. ಆದರೂ ಹೊಸ ರೂಪಾಂತರಿ ಖಚಿತಪಡಿಸಿಕೊಳ್ಳಲು ಪರೀಕ್ಷೆ ಅಗತ್ಯ. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಬೇಕು. ಅದೇ ರೀತಿ, ಆಸ್ಪತ್ರೆ ಸೇರಿ ವಿವಿಧೆಡೆ ನಡೆಸಲಾಗುತ್ತಿರುವ ಪರೀಕ್ಷೆಗಳನ್ನು ಮುಂದುವರಿಸಬೇಕು ಎಂದು ತಿಳಿಸಲಾಗಿದೆ.

ಕೆಲ ತಿಂಗಳುಗಳಿಂದ ಸೋಂಕು ಇಳಿಕೆಯಾಗಿದ್ದು, ಸೋಂಕಿತರ ಆಸ್ಪತ್ರೆ ದಾಖಲಾತಿಯೂ ಕುಸಿದಿದೆ. ಗಂಭೀರ ಅಸ್ವಸ್ಥತೆಯಿಂದ ಚಿಕಿತ್ಸೆಗೆ ದಾಖಲಾದರೂ, ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡು ಮನೆಗೆ ತೆರಳುತ್ತಿದ್ದಾರೆ. ಹಾಗೆಂದು ವೈರಾಣುವನ್ನು ನಿರ್ಲಕ್ಷ್ಯ ಮಾಡುವುದೂ ಸರಿಯಲ್ಲ. ವೈರಾಣುವನ್ನು ಅತಿ ಕಡಿಮೆ ಸಮಯದಲ್ಲಿ ಅಧ್ಯಯನ ಮಾಡುವುದು ಕಷ್ಟಸಾಧ್ಯ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಅನ್ವಯ ಈಗ ಕೈಗೊಂಡಿರುವ ಕ್ರಮಗಳನ್ನು ಮುಂದುವರಿಸಬೇಕು ಎಂದು ಸಮಿತಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.