ಬೆಂಗಳೂರು: ‘ಬೆಂಗಳೂರು ಮೆಟ್ರೊ ರೈಲಿನ ಟಿಕೆಟ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ಮೆಟ್ರೊ ರೈಲು ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸುವ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ಹೈಕೋರ್ಟ್, ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ನಿರ್ದೇಶಿಸಿದೆ.
‘ವರದಿ ಸಾರ್ವಜನಿಕಗೊಳಿಸಬೇಕು’ ಎಂದು ಕೋರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ತೇಜಸ್ವಿ ಪರ ಹೈಕೋರ್ಟ್ ವಕೀಲ ಅನಿರುದ್ಧ ಎ.ಕುಲಕರ್ಣಿ, ‘ಅರ್ಜಿಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಆಕ್ಷೇಪಣೆ ಸಲ್ಲಿಸಿದೆ. ದರ ನಿಗದಿ ಸಮಿತಿ ವರದಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲು ಜುಲೈನಲ್ಲಿ ರಾಜ್ಯ ಸರ್ಕಾರವು ತನಗೆ ಅನುಮತಿ ನೀಡಿದೆ ಎಂಬುದಾಗಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇನ್ನೂ ವೆಬ್ ಸೈಟ್‌ನಲ್ಲಿ ವರದಿ ಪ್ರಕಟಿಸಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನು ನ್ಯಾಯಪೀಠ, ‘ನ್ಯಾಯಮೂರ್ತಿ ತಾರಿಣಿ ನೇತೃತ್ವದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಪಡಿಸುವ ಕುರಿತಂತೆ ನಿಲುವು ಏನೆಂಬುದನ್ನು ತಿಳಿಸಿ’ ಎಂದು ಬಿಎಂಆರ್‌ಸಿಎಲ್ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿತು.
ಹುದ್ದೆ ಭರ್ತಿ ಕೋರಿಕೆ: ಪಿಐಎಲ್ ವಿಲೇವಾರಿ
‘ಕರ್ನಾಟಕ ರಾಜ್ಯ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗ’ದ ಸದಸ್ಯರು, ಜಿಲ್ಲಾ ಆಯೋಗಗಳಲ್ಲಿನ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಖಾಲಿ ಇರುವ ಒಟ್ಟು 61 ಹುದ್ದೆಗಳನ್ನು ಭರ್ತಿ ಮಾಡಲು ನಿರ್ದೇಶಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
ಈ ಸಂಬಂಧ ಹೈಕೋರ್ಟ್ ವಕೀಲೆ ಸುಧಾ ಕಾಟ್ವ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
‘ನೇಮಕಾತಿಗೆ ಸಂಬಂಧಿಸಿದಂತೆ ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಬೇಕು. ಅದಾದ ನಾಲ್ಕು ತಿಂಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಆಯಾ ರಾಜ್ಯಗಳು ಕ್ರಮ ಕೈಗೊಳ್ಳಬೇಕು’ ಎಂದು 2025ರ ಮೇ 21ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧರಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಅರ್ಜಿಯಲ್ಲಿ ಪ್ರತ್ಯೇಕ ಆದೇಶ ಮಾಡುವ ಅವಶ್ಯ ಇಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಿಲೇವಾರಿ ಮಾಡಿತು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಸ್.ಉಮಾಪತಿ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.