ADVERTISEMENT

ವಿಮಾನ ನಿಲ್ದಾಣಕ್ಕೆ ಮೆಟ್ರೊ: ಕೇಂದ್ರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 18:35 IST
Last Updated 20 ಏಪ್ರಿಲ್ 2021, 18:35 IST
   

ನವದೆಹಲಿ: ‘ನಮ್ಮ ಮೆಟ್ರೊ’ ರೈಲು ಯೋಜನೆಯ 2ಎ ಮತ್ತು 2ಬಿ ಹಂತಗಳ ಎತ್ತರಿಸಿದ ಮಾರ್ಗಗಳ ಕಾಮಗಾರಿಗೆ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರವರೆಗಿನ 2ಎ ಹಂತ ಹಾಗೂ ಕೆ.ಆರ್.ಪುರದಿಂದ ಹೆಬ್ಬಾಳ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ಬಿ ಹಂತಗಳಲ್ಲಿ ಒಟ್ಟು 58.19 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. ಈ ಎರಡು ಹಂತಗಳ ಕಾಮಗಾರಿಗಳಿಗೆ ಒಟ್ಟು ₹ 14,788 ಕೋಟಿ ವೆಚ್ಚವಾಗಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮವು ಅನುಷ್ಠಾನ ಗೊಳಿಸುತ್ತಿರುವ ಈ ಯೋಜನೆಗೆ ಕೇಂದ್ರದ ಪಾಲಿನ ಅನುದಾನ ಒದಗಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2021–22ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಈ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿರಲಿಲ್ಲ.

ADVERTISEMENT

ಈ ಯೋಜನೆಯ ಅನುಷ್ಠಾನದಿಂದ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಗಮಗೊಳ್ಳಲಿದ್ದು, ಸಾರ್ವಜನಿಕರ ಬಹು ದಿನಗಳ ಕನಸು ನನಸಾಗಲಿದೆ. ಹೆಚ್ಚುವರಿ ಸಾರಿಗೆ ಸೌಲಭ್ಯದೊಂದಿಗೆ ನಗರದ ಸಂಚಾರ ದಟ್ಟಣೆ ನೀಗಿಸಲು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.