ADVERTISEMENT

ಬೆಂಗಳೂರು ಗಲಭೆ |  'ಯೋಜಿತ ಸಂಚು' ಎನ್ನುತ್ತಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2020, 10:56 IST
Last Updated 12 ಆಗಸ್ಟ್ 2020, 10:56 IST
ಕಾಂಗ್ರೆಸ್, ಬಿಜೆಪಿ, ಜೆಡಿಎಸ್
ಕಾಂಗ್ರೆಸ್, ಬಿಜೆಪಿ, ಜೆಡಿಎಸ್   

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯು ಯೋಜಿತ ಸಂಚು ಎಂದುಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಶಂಕಿಸಿವೆ.

ಪ್ರವಾದಿ ಮೊಹಮ್ಮದರನ್ನು ಅವಹೇಳನ ಮಾಡುವ ಉದ್ದೇಶ ಹೊಂದಿತ್ತು ಎನ್ನಲಾದ ಫೇಸ್‌ಬುಕ್ ಪೋಸ್ಟ್‌ ಒಂದನ್ನು ನೆಪವಾಗಿಸಿಕೊಂಡು ಈ ಗಲಭೆಗಳು ನಡೆದವು. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಮತ್ತು ಪುಲಕೇಶಿನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನುಗಲಭೆಕೋರರು ಗುರಿಯಾಗಿಸಿಕೊಂಡಿದ್ದರು.

'ಗಲಭೆಯನ್ನು ನಿಯಂತ್ರಿಸಲು ನಮ್ಮ ಶಾಸಕರು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಗಲಭೆಯ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಇದೊಂದು ಯೋಜಿತ ಸಂಚು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು. 'ಗಲಭೆಯನ್ನು ಕಾಂಗ್ರೆಸ್ ಪಕ್ಷವು ಖಂಡಿಸುತ್ತದೆ. ಕಾನೂನಿನ ಪ್ರಕಾರ ಸರ್ಕಾರ ಶಿಸ್ತುಕ್ರಮ ಜರುಗಿಸಬೇಕು. ಕಾಂಗ್ರೆಸ್ ಪಕ್ಷವು ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲಿದೆ' ಎಂದು ಅವರು ಭರವಸೆ ನೀಡಿದರು.

ADVERTISEMENT

ಗಲಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಖಂಡಿಸಿದ್ದಾರೆ. 'ಘಟನೆಯನ್ನು ಗಮನಿಸಿದಾಗ ಇದೊಂದು ಯೋಜಿತ ಕೃತ್ಯ ಎನ್ನುವ ಅನುಮಾನ ಮೂಡುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಪಕ್ಷಪಾತ ಧೋರಣೆ ಮತ್ತು ಅಧಿಕಾರದ ಆಸೆಯಿಂದಾಗಿ ಒಂದು ಸಣ್ಣ ಕಿಡಿಯು ದೊಡ್ಡದಾಗಿ ಹೊತ್ತಿಉರಿಯುವಂತಾಯಿತು' ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

'ದಲಿತ ಶಾಸಕನನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗಿದೆ' ಎಂದು ಬಿಜೆಪಿ ಒತ್ತಿ ಹೇಳಿದೆ.

'ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಯಲ್ಲಿ ಗಲಭೆಕೋರರು ಪುಂಡಾಟ ನಡೆಸಿದ್ದಾರೆ. ಪೊಲೀಸ್ ಠಾಣೆಯೊಂದನ್ನು ಹಾಳುಗೆಡವಲಾಗಿದೆ. ಇಷ್ಟಾದರೂ ಓಲೈಕೆ ರಾಜಕಾರಣವೇಕೆ? ಸರಳವಾಗಿ ಮತ್ತು ನೇರವಾಗಿರಿ' ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. 'ಈ ಘಟನೆಯ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದೀರಿ' ಎಂದು ಆರೋಪಿಸಿದ್ದಾರೆ.

ಈ ಘಟನೆಯನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಳಿಗೆ ಹೋಲಿಸಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, 'ಗಲಭೆಕೋರರಿಗೆ ಅಷ್ಟೊಂದು ಕಲ್ಲು ಮತ್ತು ಪೆಟ್ರೋಲ್ ಹೇಗೆ ಸಿಕ್ತು' ಎಂದು ಪ್ರಶ್ನಿಸಿದರು.

'ಈ ಘಟನೆಗೆ ಎಸ್‌ಡಿಪಿಐ ಮತ್ತು ಪಿಎಫ್‌ಐ ನಾಯಕರೇ ಕಾರಣ' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ. 'ಇದು ಹಲವು ವರ್ಷಗಳ ಓಲೈಕೆ ರಾಜಕಾರಣದ ಪ್ರತಿಫಲ. ರಾಮಮಂದಿರ ವಿಚಾರ ಶಾಂತಿಯುತವಾಗಿ ಬಗೆಹರಿದ ಸಂದರ್ಭದಲ್ಲಿ ಸಮಾಜದ ಸೌಹಾರ್ದ ವಾತಾವರಣ ಕದಡುವ ಯತ್ನ ಇದು. ಗಲಭೆಕೋರರನ್ನು ಗೂಂಡಾ ಕಾಯ್ದೆಯ ಅಡಿ ಬಂಧಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.