ಪ್ರಜ್ವಲ್
ಚಿಂತಾಮಣಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಬುಧವಾರ ಕಾಲ್ತುಳಿತದಿಂದ ಮೃತಪಟ್ಟ 11 ಮಂದಿಯಲ್ಲಿ ಚಿಂತಾಮಣಿ ತಾಲ್ಲೂಕಿನ ಇಬ್ಬರು ಯುವಕರು ಸೇರಿದ್ದಾರೆ.
ತಾಲ್ಲೂಕಿನ ಗೋಪಲ್ಲಿ ಗ್ರಾಮದ ಪ್ರಜ್ವಲ್ (25) ಹಾಗೂ ಕುರುಟಹಳ್ಳಿ ಕೆ.ಟಿ ಶ್ರವಣ್ (20) ಮೃತರು. ಗೋಪಲ್ಲಿ ಗ್ರಾಮದ ಕಡು ಬಡತನದ ಕುಟುಂಬದ ಹಿನ್ನೆಲೆಯ ಪ್ರಜ್ವಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ.
ಇನ್ನು ಕೆ.ಟಿ.ಶ್ರವಣ್ ಬೆಂಗಳೂರಿನಲ್ಲಿರುವ ಡಾ.ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈ ಇಬ್ಬರ ಮೃತದೇಹಗಳನ್ನು ಗುರುವಾರ ಬೆಳಗ್ಗೆ ಗ್ರಾಮಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರು ಜಮಾಯಿಸಿದ್ದರು. ಸಾರ್ವಜನಿಕರ ದರ್ಶನಕ್ಕೆ ಇಟ್ಟು, ಮಧ್ಯಾಹ್ನ 3ಕ್ಕೆ ಅಂತ್ಯಕ್ರಿಯೆ ನಡೆಸಲಾಯಿತು.
(ಕೋಲಾರ ವರದಿ) ಕೆಜಿಎಫ್: ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಕೆಜಿಎಫ್ ತಾಲ್ಲೂಕಿನ ಬಡಮಾಕನಹಳ್ಳಿ ಸಹನಾ (23) ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಗುರುವಾರ ತರಲಾಯಿತು. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು.
ಗ್ರಾಮದ ಶಿಕ್ಷಕ ದಂಪತಿ ಮಂಜುಳಾ–ಸುರೇಶ್ ಬಾಬು ದಂಪತಿ ಪುತ್ರಿ ಸಹನಾ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆರ್‌ಸಿಬಿ ವಿಜಯೋ ತ್ಸವ ನೋಡಲು ಸ್ನೇಹಿತರೊಂದಿಗೆ ತೆರಳಿದ್ದರು.
(ತುಮಕೂರು ವರದಿ) ಕುಣಿಗಲ್: ಕಾಲ್ತುಳಿತದಲ್ಲಿ ತಾಲ್ಲೂಕಿನ ನಾಗಸಂದ್ರ ಗ್ರಾಮದ ಮನೋಜ್ (19) ಮೃತಪಟ್ಟಿದ್ದು, ಗುರುವಾರ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.
ಮೃತ ಮನೋಜ್ ತಂದೆ ದೇವರಾಜು, ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಉದ್ದೇಶದಿಂದ ಈಚೆಗೆ ನಾಗಸಂದ್ರ ಗ್ರಾಮದಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದ್ದರು. ಜೀವನ ನಿರ್ವಹಣೆಗಾಗಿ ಪಾನಿಪುರಿ ವ್ಯಾಪಾರ ನಡೆಸುತ್ತಿದ್ದರು. ಹೆಬ್ಬಾಳ ಬಳಿಯ ಕೆಂಪಾಪುರ ರೆಸಿಡೆನ್ಸ್ ಕಾಲೇಜಿನಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡಲು ಮನೋಜ್ ಅವರನ್ನು ದಾಖಲಿಸಿದ್ದರು.
ಕೆ.ಟಿ.ಶ್ರವಣ್
ಸಹನಾ
ಮನೋಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.