ADVERTISEMENT

ಪಿಂಚಣಿ ಯೋಜನೆ ಮಾರ್ಪಾಡಿಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 19:36 IST
Last Updated 11 ಡಿಸೆಂಬರ್ 2018, 19:36 IST

ಬೆಳಗಾವಿ: ಹೊಸ ಪಿಂಚಣಿ ಯೋಜನೆಯಲ್ಲಿ ಮಾರ್ಪಾಡು ಹಾಗೂ ಬದಲಾವಣೆ ಮಾಡಲು ಅಧಿಕಾರಿಗಳ ಸಮಿತಿ ರಚಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಮಿತಿಯ ಅಧ್ಯಕ್ಷರಾಗಿರುವರು. ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಕಾರ್ಯದರ್ಶಿ (ವೆಚ್ಚ) ಹಾಗೂ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ (ವಿಶ್ರಾಂತಿ ವೇತನ) ಸಮಿತಿಯ ಸದಸ್ಯರಾಗಿರುವರು.

ವಿಧಾನ ಪರಿಷತ್‌ನಲ್ಲಿ ಪ್ರತಿಭಟನೆ: ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಲಿಖಿತ ಹೇಳಿಕೆಯನ್ನು ಕಾನೂನು ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಹೇಳಿದರು.

ADVERTISEMENT

ಅರುಣ ಶಹಾಪುರ, ಪುಟ್ಟಣ್ಣ, ಐವನ್‌ ಡಿಸೋಜಾ, ಕೆ. ಹರೀಶಕುಮಾರ ಅವರು ಗಮನ ಸೆಳೆಯುವ ಸೂಚನೆ ಮಂಡಿಸಿ, ಎನ್‌ಪಿಎಸ್‌ನಿಂದ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ, ಮಾನವೀಯತೆ ದೃಷ್ಟಿಯಿಂದ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ಭೋಜೇಗೌಡ, ಬಿಜೆಪಿಯ ಆಯನೂರು ಮಂಜುನಾಥ, ಎಸ್‌.ವಿ ಸಂಕನೂರ, ನಾರಾಯಣಸ್ವಾಮಿ, ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಮಾತನಾಡಿ, ಈಗ ನೀಡಿರುವ ಉತ್ತರ ವಾಪಸ್‌
ಪಡೆದು, ಒಪಿಎಸ್‌ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ನೌಕರರಲ್ಲಿ ಆತಂಕ ಮೂಡಿದೆ ಎಂಬುದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಧ್ವನಿಗೂಡಿಸಿದರು.

ರಾಜ್ಯದ 2.18 ಲಕ್ಷ ಕೋಟಿ ಬಜೆಟ್‌ನಲ್ಲಿ ಶೇ 40ರಷ್ಟು ಸರ್ಕಾರಿ ನೌಕರರಿಗೆ ಖರ್ಚಾಗುತ್ತದೆ. 6ನೇ ವೇತನ ಆಯೋಗ ಶಿಫಾರಸು ಜಾರಿಯಿಂದ 11 ಸಾವಿರ ಕೋಟಿ ವೆಚ್ಚ ಆಗುತ್ತಿದೆ. ಎನ್‌ಪಿಎಸ್‌ನಿಂದ ನಷ್ಟ ಆಗುತ್ತದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ನೌಕರರಿಗೆ ಸಂಕಷ್ಟ ಎದುರಾದರೆ ಸರ್ಕಾರ ಸ್ಪಂದಿಸಲಿದೆ ಎಂದರು.

ನೌಕರರಿಗೆ ಹೆಚ್ಚು ಖರ್ಚಾಗುತ್ತದೆ ಎಂಬುದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಜನರ
ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣಕ್ಕಾಗಿ ನೀಡುವ ವೇತನ ನೌಕರರಿಗೆ ನೀಡಿದ ಹಾಗಲ್ಲ. ಜೆಡಿಎಸ್‌ ಪ್ರಣಾಳಿಕೆಯಲ್ಲಿ ಒಪಿಎಸ್‌ ಜಾರಿಗೊಳಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಸಭಾಪತಿ ಮುಂದೆ ಬಂದು ಪ್ರತಿಭಟಿಸಿದರು. ಸದಸ್ಯರ ಭಾವನೆಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಹೇಳಿದ ಮೇಲೆ ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.