ADVERTISEMENT

ಭಗೀರಥ ಜಯಂತ್ಯುತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 17:00 IST
Last Updated 9 ಫೆಬ್ರುವರಿ 2019, 17:00 IST

ಹೊಸದುರ್ಗ: ತಾಲ್ಲೂಕಿನ ಬ್ರಹ್ಮವಿದ್ಯಾನಗರ ಸುಕ್ಷೇತ್ರದಲ್ಲಿ ಆಯೋಜಿಸಿದ ಅಖಿಲ ಭಾರತ ಭಗೀರಥ ಜಯಂತ್ಯುತ್ಸವಕ್ಕೆ ನಾಡಿನ ವಿವಿಧ ಮಠಾಧೀಶರು ಶನಿವಾರ ವಿದ್ಯುಕ್ತ ಚಾಲನೆ ನೀಡಿದರು.

ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 19ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ನಾಡಿನ ಮೂಲೆ ಮೂಲೆಯಿಂದ ಉಪ್ಪಾರ ಸಮುದಾಯದ ಸಾವಿರಾರು ಭಕ್ತರು ಸುಕ್ಷೇತ್ರಕ್ಕೆ ಹರಿದು ಬಂದಿದ್ದಾರೆ.

ಮಠಾಧೀಶರು ವೇದಿಕೆ ಏರುತ್ತಿದ್ದಂತೆ ಭಕ್ತರು ಹರ್ಷೋದ್ಘಾರ ಮಾಡಿ ಸಂತಸ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯವರೆಗೆ ನಿರಂತರವಾಗಿ ನಡೆದವು.

ADVERTISEMENT

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಠಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಕೊಟ್ಟಿದ್ದು ಟೀಕೆಗೆ ಒಳಗಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಿದರೆ ಟೀಕೆ ಎದುರಿಸಬೇಕಾಗುತ್ತದೆ’ ಎಂದರು.

‘ಬಜೆಟ್‌ನಲ್ಲಿ ಆಗಿರುವ ಘೋಷಣೆ ನೋಡಿದರೆ ಯಾರು ದುಡಿಯಬೇಕಿಲ್ಲ ಅನ್ನಿಸುತ್ತದೆ. ಬಜೆಟ್‌ ಘೋಷಣೆ ನೈಜವಾಗಿ ಚಾಲ್ತಿಗೆ ಬರುತ್ತದೆಯೇ ಎಂಬ ಸಂಶಯ ಕಾಡುತ್ತಿದೆ. ಸವಲತ್ತು ನೀಡುವ ಘೋಷಣೆಯ ಬದಲಾಗಿ ಇಡೀ ನಾಡನ್ನು ಜಲಮೂಲವನ್ನಾಗಿ ರೂಪಿಸುವ, ವಿದ್ಯುತ್‌ ಸಮಸ್ಯೆ ನೀಗಿಸುವ, ಸೌರಶಕ್ತಿ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.