ADVERTISEMENT

ಕದ್ದಾಲಿಕೆ: ಸಿಬಿಐ ವರದಿ ಪ್ರಶ್ನಿಸಿದ ಭಾಸ್ಕರ್ ರಾವ್‌

ಎಚ್‌ಡಿಕೆ ಅವಧಿಯ ಪ್ರಕರಣ: ನ್ಯಾಯಾಲಯಕ್ಕೆ ತಕರಾರು ಅರ್ಜಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 22:34 IST
Last Updated 31 ಆಗಸ್ಟ್ 2021, 22:34 IST
ಭಾಸ್ಕರ್ ರಾವ್‌
ಭಾಸ್ಕರ್ ರಾವ್‌   

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿದ್ದ ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಕೈಬಿಡುವಂತೆ ಸಿಬಿಐ ಸಲ್ಲಿಸಿರುವ ಅಂತಿಮ ವರದಿಯನ್ನು ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಎರಡು ಭಾಗಗಳಾಗಿ ವಿಭಜಿಸಿ ಸಿಬಿಐ ತನಿಖೆ ನಡೆಸಿತ್ತು. ಕದ್ದಾಲಿಕೆ ಕುರಿತು ಪ್ರಾಥಮಿಕ ತನಿಖೆ ನಡೆಸಿದರೆ, ಕದ್ದಾಲಿಸಿ ರೆಕಾರ್ಡಿಂಗ್‌ ಮಾಡಿದ್ದ ದೂರವಾಣಿ ಸಂಭಾಷಣೆಯ ತುಣುಕುಗಳನ್ನು ಸೋರಿಕೆ ಮಾಡಿದ ಆರೋಪದ ಕುರಿತು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿತ್ತು. ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಮತ್ತಿತರರ ವಿರುದ್ಧ ಎರಡನೇ ಪ್ರಕರಣದಲ್ಲಿ ತನಿಖೆ ಕೈಬಿಡುವಂತೆ ಶಿಫಾರಸು ಮಾಡಿ ಜೂನ್‌ 30ರಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

‘ಆಗ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಹುದ್ದೆಯಲ್ಲಿದ್ದ ಭಾಸ್ಕರ್‌ ರಾವ್‌ ಮತ್ತು ಫರಾಜ್‌ ಎಂಬುವವರ ನಡುವಿನ ದೂರವಾಣಿ ಸಂಭಾಷಣೆಯ ಕದ್ದಾಲಿಕೆ ಹಾಗೂ ಸೋರಿಕೆ ಮಾಡಿರುವುದು ದೃಢಪಟ್ಟಿದ್ದರೂ, ಸೋರಿಕೆ ಯಾವ ಮಾರ್ಗವಾಗಿ ನಡೆದಿದೆ ಎಂಬುದಕ್ಕೆ ಸರಿಯಾದ ಸಾಕ್ಷ್ಯ ಲಭಿಸಿಲ್ಲ. ಈ ಕಾರಣದಿಂದ ಪ್ರಕರಣವು ವಿಚಾರಣೆಯ ಹಂತದಲ್ಲಿ ನಿಲ್ಲುವುದು ಕಷ್ಟ’ ಎಂಬ ಅಭಿಪ್ರಾಯದೊಂದಿಗೆ ಸಿಬಿಐ ಎಸ್‌ಪಿ ಕಿರಣ್‌ ಎಸ್‌. ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು.

ADVERTISEMENT

‘ಭಾಸ್ಕರ್‌ ರಾವ್‌ ಮತ್ತು ಫರಾಜ್‌ ನಡುವಿನ ಸಂಭಾಷಣೆಯನ್ನು ‘ಆಡಿಯೊ ಬಾಂಬ್‌ ಮಹಾ ಎಕ್ಸ್‌ಕ್ಲೂಸಿವ್‌’ ಶೀರ್ಷಿಕೆಯಡಿ ನ್ಯೂಸ್‌–18 ಕನ್ನಡ ಸುದ್ದಿ ವಾಹಿನಿಯಲ್ಲಿ ಪ್ರಕಟಿಸಲಾಗಿತ್ತು. ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ನ ತಾಂತ್ರಿಕ ಸೇವಾ ಘಟಕದಲ್ಲಿ (ಟಿಎಸ್‌ಸಿ) ಕದ್ದಾಲಿಕೆ ಮಾಡಲಾಗಿತ್ತು. ರೆಕಾರ್ಡ್‌ ಮಾಡಿದ್ದ ಆಡಿಯೊ ತುಣುಕುಗಳನ್ನು ಆಗಿನ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌ ತರಿಸಿಕೊಂಡಿದ್ದರು. ಆ ಬಳಿಕ ನ್ಯೂಸ್‌–18 ಕನ್ನಡ ಸುದ್ದಿ ವಾಹಿನಿಯ ಪತ್ರಕರ್ತೆ ಕುಶಲ ಅವರಿಗೆ ತಲುಪಿಸಲಾಗಿತ್ತು. ಆದರೆ, ಆಡಿಯೊ ತುಣುಕು ರವಾನಿಸಿದ ಬಳಿಕ ಅಲೋಕ್‌ ಕುಮಾರ್‌ ಮತ್ತು ಇನ್‌ಸ್ಪೆಕ್ಟರ್‌ ಮಿರ್ಜಾ ಅಲಿ ರಾಜಾ ತಮ್ಮ ಮೊಬೈಲ್‌ಗಳನ್ನು ಫಾರ್ಮ್ಯಾಟ್‌ ಮಾಡಿರುವುದರಿಂದ ಸಾಕ್ಷ್ಯ ಪತ್ತೆಮಾಡಲು ಸಾಧ್ಯವಾಗಿಲ್ಲ’ ಎಂದು ಸಿಬಿಐ ಸಲ್ಲಿಸಿರುವ ವರದಿಯನ್ನು ಭಾಸ್ಕರ್‌ ರಾವ್‌ ಪ್ರಶ್ನಿಸಿದ್ದಾರೆ.

ತಾವು ದೂರವಾಣಿ ಕದ್ದಾಲಿಕೆ ಪ್ರಕರಣದ ಸಂತ್ರಸ್ತ. ಅರೋಪಿಗಳ ವಿರುದ್ಧ ಸಾಕ್ಷ್ಯಗಳು ಲಭ್ಯವಿದ್ದರೂ, ಪ್ರಕರಣ ಮುಕ್ತಾಯಕ್ಕೆ ವರದಿ ಸಲ್ಲಿಸಲಾಗಿದೆ. ಮೊಬೈಲ್‌ಗಳನ್ನು ಫಾರ್ಮ್ಯಾಟ್‌ ಮಾಡಿ, ಸಾಕ್ಷ್ಯ ನಾಶ ಮಾಡಿರುವ ಕಾರಣಕ್ಕಾಗಿಯೇ ಅಲೋಕ್‌ ಕುಮಾರ್‌ ವಿರುದ್ಧ ಕ್ರಮ ಜರುಗಿಸಲು ಅವಕಾಶವಿದೆ. ಸಿಬಿಐ ವರದಿಯನ್ನು ತಿರಸ್ಕರಿಸಿ ಹೆಚ್ಚಿನ ತನಿಖೆಗೆ ನಿರ್ದೇಶನ ನೀಡಬೇಕು ಅಥವಾ ನೇರವಾಗಿ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಾಥಮಿಕ ತನಿಖೆ ಏನಾಗಿದೆ?
‘ದೂರವಾಣಿ ಕದ್ದಾಲಿಕೆ ಕುರಿತು ಪ್ರಾಥಮಿಕ ತನಿಖೆ ನಡೆಸಿರುವುದನ್ನು ಸಿಬಿಐ ತನ್ನ ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ, ಪ್ರಾಥಮಿಕ ತನಿಖೆಯ ವರದಿಯನ್ನು ಲಗತ್ತಿಸಿಲ್ಲ ಮತ್ತು ಅಲ್ಲಿ ಕಂಡುಬಂದ ಅಂಶಗಳೇನು ಎಂಬುದನ್ನೂ ಹೇಳಿಲ್ಲ’ ಎಂದು ಭಾಸ್ಕರ್‌ ರಾವ್‌ ತಕರಾರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

ಪ್ರಕರಣದ ತನಿಖೆ ಕೈಬಿಡಬೇಕೆಂಬ ಸಿಬಿಐ ಅಧಿಕಾರಿಗಳ ಅಂತಿಮ ಅಭಿಪ್ರಾಯ ಮತ್ತು ಪ್ರಕರಣದಲ್ಲಿ ಪತ್ತೆಮಾಡಿರುವ ಸಾಕ್ಷ್ಯಗಳ ನಡುವೆ ಹೊಂದಾಣಿಕೆ ಇಲ್ಲ. ತಾನೇ ತನಿಖೆ ಅರಂಭಿಸಿದ್ದ ತನಿಖೆಯನ್ನು ಅಂತ್ಯಗೊಳಿಸಲು ಸಿಬಿಐ ಅತ್ಯುತ್ಸಾಹ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.