ADVERTISEMENT

ಭೋವಿ ನಿಗಮದಲ್ಲಿ ಅವ್ಯವಹಾರ: ಎಸಿಬಿ ತನಿಖೆ

ಗಂಗಾ ಕಲ್ಯಾಣ ಯೋಜನೆ ಸಮಗ್ರ ತನಿಖೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 19:30 IST
Last Updated 28 ಮಾರ್ಚ್ 2022, 19:30 IST
   

ಬೆಂಗಳೂರು: ‘ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಭ್ರಷ್ಟಾಚಾರ ತನಿಖಾ ದಳದಿಂದ (ಎಸಿಬಿ) ತನಿಖೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಿಧಾನಸಭೆಯಲ್ಲಿ ಇಲಾಖಾ ಬೇಡಿಕೆ ಮೇಲಿನ ಚರ್ಚೆಗೆ ಸೋಮವಾರ ಉತ್ತರ ನೀಡಿದ ಅವರು, ‘ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅವರು ಹೈಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತಂದರು. ಕ್ರಮ ಕೈಗೊಂಡರೂ ತಡೆಯಾಜ್ಞೆ ತರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯ ಗೂಳಿಹಟ್ಟಿ ಶೇಖರ್‌, ‘ಭೋವಿ ಅಭಿವೃದ್ಧಿ ನಿಗಮದಲ್ಲಿ ₹400 ಕೋಟಿ ಅವ್ಯವಹಾರ ನಡೆದಿದೆ. ಇದರಲ್ಲಿ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದಾರೆ. ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಅಧಿಕಾರ ಸ್ವೀಕರಿಸಲು ಬಂದ ಅಧಿಕಾರಿಯ ಮೇಲೆಯೇ ಮಹಿಳಾ ಅಧಿಕಾರಿ ಅತ್ಯಾಚಾರದ ಆರೋಪ ಮಾಡಿದರು’ ಎಂದು ದೂರಿದರು.

ADVERTISEMENT

ಕಾಂಗ್ರೆಸ್‌ನ ‍‍ಪ್ರಿಯಾಂಕ್‌ ಖರ್ಗೆ, ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬೋರ್‌ವೆಲ್‌ ಕೊರೆಸಲು ₹93 ಸಾವಿರ ವೆಚ್ಚ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ₹1.80 ಲಕ್ಷ ಖರ್ಚು ಮಾಡಲಾಗುತ್ತಿದೆ. ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿ ವೆಚ್ಚ ಏಕೆ’ ಎಂದು ‍ಪ್ರಶ್ನಿಸಿದರು. ಗಂಗಾ ಕಲ್ಯಾಣ ಯೋಜನೆಯ ಅಕ್ರಮದ ಬಗ್ಗೆ ಹಲವು ಸದಸ್ಯರು ‍ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವರು, ‘ಗಂಗಾ ಕಲ್ಯಾಣ ಯೋಜನೆಯ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು’ ಎಂದು ಪ್ರಕಟಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಂಚಿಕೆಯಾಗುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ’ ಎಂದು ಗಮನ ಸೆಳೆದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಗೆ ₹89 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. 2018–19ರಲ್ಲಿ ₹29,600 ಕೋಟಿ ಒದಗಿಸಲಾಗಿತ್ತು. ರಾಜ್ಯದ ಬಜೆಟ್‌ ಗಾತ್ರ ₹72 ಸಾವಿರ ಕೋಟಿ ಜಾಸ್ತಿ ಆಗಿದೆ. ಆದರೆ, ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಗೆ ನೀಡುತ್ತಿರುವ ಅನುದಾನ ಕಡಿಮೆ ಆಗುತ್ತಿದೆ. ಈ ವರ್ಷ ₹28 ಸಾವಿರ ಕೋಟಿಯಷ್ಟೇ ಒದಗಿಸಲಾಗಿದೆ. ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸೋಪ್‌ ಕಿಟ್‌ಗಳನ್ನು ಸಹ ನಿಲ್ಲಿಸಲಾಗಿದೆ. ಇದು ಅನ್ಯಾಯ ಅಲ್ಲವೇ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಬಿ.ಎಸ್‌.ಸುರೇಶ್‌, ‘ಶಿವಮೊಗ್ಗದ ಹರ್ಷ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲಾಗಿದೆ. ಆದರೆ, ಬೆಳ್ತಂಗಡಿಯ ಕುಟುಂಬಕ್ಕೆ ನಯಾಪೈಸೆ ನೆರವು ನೀಡಿಲ್ಲ. ಈ ಕುಟುಂಬಕ್ಕೂ ಸರ್ಕಾರದಿಂದ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.