ನವದೆಹಲಿ: 2015ರ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ವಂಚನೆ ಮತ್ತು ಪಿತೂರಿ ಆರೋಪ ಹೊತ್ತಿರುವ ಬೆಂಗಳೂರಿನ ನಾಲ್ವರು ಭೂಮಾಲೀಕರ ವಿರುದ್ಧದ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಆದಾಗ್ಯೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತಂದಿದ್ದಾರೆ. ಅಲ್ಲದೇ, ಸ್ವಾಧೀನಪಡಿಸಿಕೊಂಡ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಹಿಂದಿರುಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
‘ನ್ಯಾಯಾಲಯವು ಪ್ರಸ್ತುತ ಮೇಲ್ಮನವಿಯನ್ನು ಅನುಮತಿಸಿದೆ. ಆದರೆ, ಶಾಸನಬದ್ಧ ಸಂಸ್ಥೆಗಳ ಲೋಪದಿಂದಾಗಿ ಸಾಮಾನ್ಯ ನಾಗರಿಕರ, ವಿಶೇಷವಾಗಿ ಬೆಂಗಳೂರಿನ ಹಿತಾಸಕ್ತಿಗೆ ಧಕ್ಕೆಯಾಗಿದೆ’ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ.
ರಾಜಮಹಲ್ ವಿಲಾಸ್ ಎರಡನೇ ಹಂತದ ಬಡಾವಣೆ ನಿರ್ಮಿಸುವುದಕ್ಕಾಗಿ ಪ್ರಾಧಿಕಾರವು ಭೂಪಸಂದ್ರ ಗ್ರಾಮದ ಸರ್ವೆ ನಂಬರ್ 20ರಲ್ಲಿ 3 ಎಕರೆ 34 ಗುಂಟೆ ಹಾಗೂ ಸರ್ವೆ ನಂಬರ್ 21ರಲ್ಲಿ 2 ಎಕರೆ 32 ಗುಂಟೆ ಸ್ವಾಧೀನ ಮಾಡಿಕೊಂಡು 42 ಜನರಿಗೆ ನಿವೇಶನ ಹಂಚಿಕೆ ಮಾಡಿತ್ತು. 1992ರಲ್ಲಿ ಆಗಿನ ಸರ್ಕಾರ ಈ ಜಮೀನನ್ನು ಸಂಪೂರ್ಣವಾಗಿ ಡಿನೋಟಿಫೈ ಮಾಡಿ ಮೂಲ ಮಾಲೀಕರ ವಶಕ್ಕೆ ನೀಡಿತ್ತು. ಇದನ್ನು ಪ್ರಶ್ನಿಸಿ ನಿವೇಶನಗಳ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಡಿನೋಟಿಫಿಕೇಷನ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು.
ಈ ನಡುವೆ, ಕೀರ್ತಿರಾಜ್ ಶೆಟ್ಟಿ ಎಂಬುವರು ನೀಡಿದ ಖಾಸಗಿ ದೂರಿನ ಆಧಾರದಲ್ಲಿ 2023ರ ಅಕ್ಟೋಬರ್‌ನಲ್ಲಿ ಸಂಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
‘ಭೂಪಸಂದ್ರ ಗ್ರಾಮದಲ್ಲಿ 6 ಎಕರೆ ಜಮೀನನ್ನು ಮಾರಾಟ ಮಾಡಲು ಶೆಟ್ಟಿ ಅವರು ಆರೋಪಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆರೋಪಿಗಳು ಗಣನೀಯ ಮೊತ್ತದ ಹಣ ಪಡೆದು ಸಾಮಾನ್ಯ ಪವರ್ ಆಫ್ ಅಟಾರ್ನಿ ಕಾರ್ಯಗತಗೊಳಿಸಿದ್ದರು. ನಂತರ ಅದನ್ನು ರದ್ದುಗೊಳಿಸಿ ಜಮೀನನ್ನು ಬೇರೆಯವರಿಗೆ ವರ್ಗಾಯಿಸಿದ್ದರು’ ಎಂದು ದೂರುದಾರರು ಆರೋಪಿಸಿದ್ದರು. ಪೊಲೀಸರು 2024ರ ಆಗಸ್ಟ್ 8ರಂದು ಆರೋಪಪಟ್ಟಿ ಸಲ್ಲಿಸಿದ್ದರು. ಎಫ್‌ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಆರೋಪಿಗಳ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಮೇಲ್ಮನವಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಪೀಠವು ಭೂ ವಿವಾದದ ಹಿನ್ನೆಲೆಯನ್ನು ಪರಿಶೀಲಿಸಿತು. ಜಮೀನು ಮತ್ತೆ ಖಾಸಗಿ ವ್ಯಕ್ತಿಗಳ ಪಾಲಾಗುವ ಸಂದರ್ಭದಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದೂ ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.