ADVERTISEMENT

ಬೀದರ್‌ನ ಮಹಿಳೆಗೆ ‘ಸ್ವಚ್ಛ ಸುಜಲ್‌ ಶಕ್ತಿ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 23:15 IST
Last Updated 4 ಮಾರ್ಚ್ 2023, 23:15 IST
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಪವಾರ್ ಅವರಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರು ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ -2023 ಪ್ರಶಸ್ತಿ ಪ್ರದಾನ ಮಾಡಿದರು
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಪವಾರ್ ಅವರಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರು ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ -2023 ಪ್ರಶಸ್ತಿ ಪ್ರದಾನ ಮಾಡಿದರು   

ನವದೆಹಲಿ: ಕೇಂದ್ರ ಜಲಶಕ್ತಿ ಸಚಿವಾಲಯದ ಆಶ್ರಯದಲ್ಲಿ ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೀದರ್‌ ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯೆ ಸೇರಿದಂತೆ 36 ಮಹಿಳಾ ಸಾಧಕಿಯರಿಗೆ ‘ಸ್ವಚ್ಛ ಸುಜಲ್‌ ಶಕ್ತಿ ಪ್ರಶಸ್ತಿ–2023’ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ನೀರು, ನೈರ್ಮಲ್ಯ ವಿಷಯಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಬೀದರ್‌ನ ಧೂಪತ್‌ಮಹಾಗಾಂವ್ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ವಿನೋದ್‌ ಪವಾರ್ ಅವರು ‘ಸ್ವಚ್ಛ ಭಾರತ್‌ ಮಿಷನ್‌–ಗ್ರಾಮೀಣ’ ವಿಭಾಗದಲ್ಲಿ ಪ್ರಶಸ್ತಿ ಪಡೆದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆ ಕಾಟ ವಿಪರೀತವಾಗಿತ್ತು. ಇದರಿಂದಾಗಿ, 680 ಮನೆಗಳಿರುವ ಈ ಗ್ರಾಮದಲ್ಲಿ ಮಲೇರಿಯಾ ಹಾಗೂ ಡೆಂಗಿ ರೋಗದಿಂದ ಜನರು ಬಳಲುತ್ತಿದ್ದರು. ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಬೂದು ನೀರು ನಿಯಂತ್ರಣ ಉಪಕ್ರಮಗಳನ್ನು ಆರಂಭಿಸಿತು. ಈ ವೇಳೆ, ಗೀತಾ ಅವರು ವೈಯಕ್ತಿಕ ಶೌಚಾಲಯದ ಹಾಗೂ ಕೊಳಚೆ ಗುಂಡಿ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ADVERTISEMENT

ಮೂಲದಲ್ಲಿಯೇ ಕೊಳಚೆ ನೀರು ಮತ್ತು ಕಸ ಸಂಸ್ಕರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಗ್ರಾಮದ ನಿವಾಸಿಗಳು ಮನೆಯಲ್ಲಿಯೇ ಕಸ ಸಂಸ್ಕರಣೆ ಮಾಡುತ್ತಿದ್ದಾರೆ. ಒಣ ಕಸ ಸಂಸ್ಕರಣೆಗೆ ಜಿಲ್ಲಾ ಪಂಚಾಯಿತಿ ಈಗ ಗ್ರಾಮದಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಗ್ರಾಮದಲ್ಲಿ ಈಗ ಎಲ್ಲ ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.