ADVERTISEMENT

ದುಬಾರಿ ಮದುವೆ: ರೆಡ್ಡಿ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 18:53 IST
Last Updated 7 ಜನವರಿ 2019, 18:53 IST

ಬೆಂಗಳೂರು: ಇಲ್ಲಿನ ಅರಮನೆ ಆವರಣದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ ಮಾಜಿ ಸಚಿವರೊಬ್ಬರ ವಿರುದ್ಧ ಆದಾಯ ತೆರಿಗೆ ಇಲಾಖೆ (ಐ.ಟಿ) ಸದ್ಯದಲ್ಲೇ ಮೊಕದ್ದಮೆ ದಾಖಲಿಸಲಿದೆ.

ಈ ಅದ್ದೂರಿ ಮದುವೆಗೆ ಮಾಡಿರುವ ಖರ್ಚುವೆಚ್ಚ ಕುರಿತು ತನಿಖೆ ನಡೆಯುತ್ತಿದ್ದು, ಸದ್ಯದಲ್ಲೇ ಮೊಕದ್ದಮೆ ದಾಖಲಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವೃತ್ತದ ಮಹಾನಿರ್ದೇಶಕ (ತನಿಖೆ) ಬಿ.ಆರ್‌. ಬಾಲಕೃಷ್ಣನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾಜಿ ಸಚಿವರ ಮಗಳ ಅದ್ದೂರಿ ಮದುವೆ ಸಂಬಂಧ ಮೊಕದ್ದಮೆ ದಾಖಲಿಸಲಾಗಿದೆಯೇ?’ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಬಾಲಕೃಷ್ಣನ್‌ ಉತ್ತರಿಸಿದರು.ಜನಾರ್ದನರೆಡ್ಡಿ ‍ಪ್ರಕರಣದ ಸಂಬಂಧ ಅವರು ಈ ಮಾಹಿತಿ ನೀಡಿದರು. ಆದರೆ, ಎಲ್ಲಿಯೂ ರೆಡ್ಡಿ ಹೆಸರು ಪ್ರಸ್ತಾಪಿಸಲಿಲ್ಲ.

ADVERTISEMENT

‘ಕೇಂದ್ರ ಸರ್ಕಾರ ತನ್ನ ರಾಜಕೀಯ ಎದುರಾಳಿಗಳನ್ನು ಬಗ್ಗುಬಡಿಯಲು ಐ.ಟಿ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂಬ ಆರೋಪವನ್ನು ಬಾಲಕೃಷ್ಣನ್‌ ತಳ್ಳಿಹಾಕಿದರು. ಎಲ್ಲ ಪಕ್ಷ ಗಳ ನಾಯಕರ ಮನೆಗಳ ಮೇಲೂ ದಾಳಿ ನಡೆದಿದೆ ಎಂದರು.

ಆದರೆ, ಯಾವುದೇ ನಾಯಕರ ಹೆಸರನ್ನು ಹೇಳಲಿಲ್ಲ.

2017– 18ನೇ ಸಾಲಿನಲ್ಲಿ ಐ.ಟಿ ₹ 12 ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ ಹಚ್ಚಿದೆ. ಇದರಲ್ಲಿ ₹ 5 ಸಾವಿರ ಕೋಟಿಗೂ ಅಧಿಕ ಅಘೋಷಿತ ಆಸ್ರಿಯನ್ನು ಅವುಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ₹ 78 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಈ ವರ್ಷದ ನವೆಂಬರ್‌ ಅಂತ್ಯದವರೆಗೆ ನಡೆದ ದಾಳಿ ಮತ್ತು ಶೋಧನೆಯಲ್ಲಿ₹ 6,134 ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ₹ 4038 ಮೌಲ್ಯದ ಆಸ್ತಿಯನ್ನು ಅವುಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ₹ 120 ಕೋಟಿ ಮೌಲ್ಯದ ಆಸ್ತಿ ಜಪ್ತಿಯಾಗಿದೆ ಎಂದರು.

ರಾಜಕಾರಣಿಗಳು, ಅಧಿಕಾರಿಗಳು, ಮದ್ಯ ತಯಾರಿಕೆ ಉದ್ಯಮಿಗಳು, ಬಹರಾಷ್ಟೀಯ ಕಂಪೆನಿಗಳು, ಗಣಿ ಉದ್ಯಮಿಗಳು ಸೇರಿದಂತೆ ಅನೇಕ ದೊಡ್ಡ ಕುಳಗಳ ಮೇಲೆ ದಾಳಿ ನಡೆದಿದೆ. ಕೆಲವರು ಹೊರದೇಶಗಳಲ್ಲಿ ಹೂಡಿಕೆ ಮಾಡಿ ಲೇವಾದೇವಿ ನಿಯಂತ್ರಣ ಕಾಯ್ದೆ, ಕಪ್ಪು ಹಣ ನಿಯಂತ್ರಣಾ ಕಾಯ್ದೆ ಉಲ್ಲಂಘಿಸಿದ್ದಾರೆ. ಈ ಸಂಬಂಧ ಅನೇಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಅವರು ವಿವರಿಸಿದರು.

ಐ.ಟಿ ಕರ್ನಾಟಕ ಮತ್ತು ಗೋವಾ ವೃತ್ತವು ತನಿಖಾ ದಿನಾಚರಣೆ ಅಂಗವಾಗಿ ತನಿಖಾ ವಿಭಾಗದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ 125 ಅಧಿಕಾರಿಗಳನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದೆ ಎಂದೂ ಬಾಲಕೃಷ್ಣನ್ ತಿಳಿಸಿದರು. ಐ.ಟಿ ಕಮಿಷನರ್‌ಗಳಾದ ಅನಿಲ್‌ ಕುಮಾರ್‌ ಮತ್ತು ವೈ. ರಾಜೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.