ADVERTISEMENT

ರಸ್ತೆ ನಿರ್ಮಾಣದಲ್ಲಿ ಕರ್ನಾಟಕ ಮಾದರಿ: ರಾಜ್ಯವನ್ನು ಶ್ಲಾಘಿಸಿದ ಬಿಹಾರ ಸಚಿವ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 16:22 IST
Last Updated 27 ಆಗಸ್ಟ್ 2021, 16:22 IST
ಬಿಹಾರದ ರಸ್ತೆ ನಿರ್ಮಾಣ ಸಚಿವ ನಿತಿನ್‌ ನಬಿನ್‌ ಅವರಿಗೆ ರಾಜ್ಯದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ರಸ್ತೆ ನಿರ್ಮಾಣ ಯೋಜನೆಗಳ ಕುರಿತು ವಿವರಿಸಿದರು
ಬಿಹಾರದ ರಸ್ತೆ ನಿರ್ಮಾಣ ಸಚಿವ ನಿತಿನ್‌ ನಬಿನ್‌ ಅವರಿಗೆ ರಾಜ್ಯದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ರಸ್ತೆ ನಿರ್ಮಾಣ ಯೋಜನೆಗಳ ಕುರಿತು ವಿವರಿಸಿದರು   

ಬೆಂಗಳೂರು: ‘ರಸ್ತೆ ನಿರ್ಮಾಣ ಮತ್ತು ಸಂಪರ್ಕ ಸುಧಾರಣೆಯಲ್ಲಿ ಕರ್ನಾಟಕವು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಬಿಹಾರದಲ್ಲೂ ಈ ಮಾದರಿಯನ್ನು ಅನುಸರಿಸಲಾಗುವುದು’ ಎಂದು ಬಿಹಾರದ ರಸ್ತೆ ನಿರ್ಮಾಣ ಸಚಿವ ನಿತಿನ್‌ ನಬಿನ್‌ ಹೇಳಿದರು.

ರಾಜ್ಯದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರನ್ನು ವಿಕಾಸಸೌಧದಲ್ಲಿ ಶುಕ್ರವಾರ ಭೇಟಿಮಾಡಿದ ನಿತಿನ್‌, ರಾಜ್ಯದಲ್ಲಿನ ರಸ್ತೆ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಮೂಲೆ ಮೂಲೆಗೂ ಹೆದ್ದಾರಿಗಳ ಜಾಲವನ್ನು ವಿಸ್ತರಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ ಆಗಿರುವುದರಿಂದ ಅಭಿವೃದ್ಧಿಗೆ ಅನುಕೂಲ ಆಗಿದೆ. ಸಂಪರ್ಕ ಕ್ರಾಂತಿಯಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ’ ಎಂದರು.

ADVERTISEMENT

ರಾಜ್ಯದಲ್ಲಿ ರಸ್ತೆ ನಿರ್ಮಾಣ ಯೋಜನೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಕುರಿತು ವಿವರ ನೀಡಿದ ಸಿ.ಸಿ. ಪಾಟೀಲ, ‘ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ವಹಣೆ ಹಾಗೂ ವಾಹನಗಳ ಸಂಚಾರಕ್ಕೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ’ ಎಂದರು.

ರಾಜ್ಯದಲ್ಲಿರುವ ಹೆದ್ದಾರಿಗಳ ಜಾಲ, ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್‌ ನೆರವಿನಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣ ಯೋಜನೆಗಳ ಕುರಿತು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಮಾಹಿತಿ ನೀಡಿದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಯೋಜನಾಧಿಕಾರಿ ಗುರುಪ್ರಸಾದ್, ರಾಷ್ಟ್ರೀಯ ಹೆದ್ದಾರಿ ವಲಯದ ಮುಖ್ಯ ಎಂಜಿನಿಯರ್‌ ಗೋವಿಂದರಾಜು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.