ADVERTISEMENT

ಬೈಕ್‌, ಟ್ಯಾಕ್ಸಿ ಪರವಾನಗಿ: ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 23:20 IST
Last Updated 24 ಜೂನ್ 2025, 23:20 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸಿ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶವು; ಉದ್ಯಮ ನಡೆಸಲು ಸಾಂವಿಧಾನಿಕವಾಗಿ ಕೊಡಮಾಡಲಾಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಬೈಕ್‌ ಟ್ಯಾಕ್ಸಿ ಮಾಲೀಕರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ವರೀಕೃತಿ ಮಹೇಂದ್ರ ರೆಡ್ಡಿ ಮಧು ಕಿರಣ್‌ ರೊಪ್ಪೇನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಬೈಕ್‌ ಟ್ಯಾಕ್ಸಿ ವೆಲ್‌ಫೇರ್‌ ಅಸೋಸಿಯೇಷನ್‌ ಪ್ರತಿನಿಧಿಗಳು ಸಲ್ಲಿರುವ ರಿಟ್‌ ಮೇಲ್ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬೈಕ್‌ ಮಾಲೀಕರಾದ ವಿ.ಮಹೇಂದ್ರ ರೆಡ್ಡಿ ಮತ್ತು ಮಧು ಕಿರಣ್‌ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ‘ಬೈಕ್‌ ಟ್ಯಾಕ್ಸಿ ಸೇವೆ ನೀಡಲು ದ್ವಿಚಕ್ರ ವಾಹನ ಮಾಲೀಕರನ್ನು ಸೇರ್ಪಡೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಆದರೆ ಕಳೆದ ಹತ್ತು ದಿನಗಳಿಂದ ಬೈಕ್‌ ಟ್ಯಾಕ್ಸಿ ಸೇವೆಯನ್ನು ಅಗ್ರಿಗೇಟರ್ಸ್‌ ನಿಲ್ಲಿಸಲಾಗಿದೆ. ಇತರೆ ರಾಜ್ಯಗಳಲ್ಲಿ ಇಂತಹ ಸೇವೆಗೆ ಅವಕಾಶ ಕಲ್ಪಿಸಿರುವಾಗ ರಾಜ್ಯ ಸರ್ಕಾರದ ಈ ನಡೆ ಕಾನೂನುಬಾಹಿರವಾಗಿದೆ’ ಎಂದರು.

ADVERTISEMENT

ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ ಶೆಟ್ಟಿ ಅರ್ಜಿದಾರರ ಪರ ವಕೀಲರ ವಾದವನ್ನು ಬಲವಾಗಿ ಆಕ್ಷೇಪಿಸಿದರು. ಅಂತೆಯೇ ಅಡ್ವೊಕೇಟ್‌ ಜನರಲ್‌ ಅವರ ವಿಸ್ತೃತ ವಾದ ಮಂಡನೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಜೂನ್‌ 25) ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.