ಬೆಂಗಳೂರು: ‘ಬೈಕ್ ಟ್ಯಾಕ್ಸಿ ಸೇವೆಯನ್ನು ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸುವ ಬಗ್ಗೆ ಮುಂದಿನ ಒಂದು ತಿಂಗಳಲ್ಲಿ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ.
ಈ ಸಂಬಂಧ ‘ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಓಲಾ)’ ಕಂಪನಿ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರ ವಾದ ಆಲಿಸಿದ ನ್ಯಾಯಪೀಠ, ‘ಬೈಕ್ ಟ್ಯಾಕ್ಸಿ ಸೇವೆಗೆ ಶಾಸನಬದ್ಧ ಅನುಮತಿ ಇರುವಾಗ ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ನಿಷೇಧ ಹೇರುವುದು ತರವಲ್ಲ ಮತ್ತು ಸದ್ಯ ಹೇರಲಾಗಿರುವ ನಿಷೇಧವನ್ನು ಅನಿರ್ದಿಷ್ಟ ಅವಧಿಗೆ ಮುಂದುವರಿಸಲೂ ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
‘ದೇಶದಲ್ಲಿ ಪ್ರತಿಯೊಬ್ಬರಿಗೂ ನ್ಯಾಯಯುತವಾಗಿ ವ್ಯವಹಾರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಬೈಕ್-ಟ್ಯಾಕ್ಸಿ ಸೇವೆ ವಿಚಾರವಾಗಿ ಸರ್ಕಾರ ನಿಯಮ ರೂಪಿಸುವತ್ತ ತನ್ನ ಚಿತ್ತ ಹರಿಸಬೇಕು. ಈಗಾಗಲೇ 13 ರಾಜ್ಯಗಳು ಈ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿರುವಾಗ ನೀವೇಕೆ ನಿಷೇಧ ವಿಧಿಸಿದ್ದೀರಿ’ ಎಂದು ಪ್ರಶ್ನಿಸಿತು.
‘ಬೈಕ್-ಟ್ಯಾಕ್ಸಿ ಕಾರ್ಯಾಚರಣೆಯಿಂದಾಗಿ ಸಂಚಾರ ದಟ್ಟಣೆಯೇನೂ ಉಂಟಾಗುವುದಿಲ್ಲ. ನಾಲ್ಕು ಚಕ್ರಗಳ ವಾಹನ ಸಂಚರಿಸದೇ ಇರುವ ಕಡೆ ದ್ವಿಚಕ್ರ ವಾಹನ ಚಲಾಯಿಸಬಹುದು. ತಮ್ಮ ಜೀವನೋಪಾಯಕ್ಕಾಗಿ ಅನೇಕ ಮಂದಿ ಈ ಸೇವೆಯನ್ನೇ ಅವಲಂಬಿಸಿರುವುದನ್ನು ಸರ್ಕಾರ ಮನಗಾಣಬೇಕು’ ಎಂದು ಹೇಳಿತು.
‘ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನೀತಿ ನಿಯಮಾವಳಿ ರೂಪಿಸಬೇಕು. ಇದಕ್ಕಾಗಿ ನಿಮಗೆ ಸಮಯ ನೀಡಲಾಗುತ್ತಿದೆ. ಅಷ್ಟರೊಳಗೆ ಈ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂಬ ನ್ಯಾಯಪೀಠದ ಸೂಚನೆಗೆ ಶಶಿಕಿರಣ್ ಶೆಟ್ಟಿ, ‘ನಾಲ್ಕು ವಾರಗಳಲ್ಲಿ ಸರ್ಕಾರ ತನ್ನ ನಿಲುವು ತಿಳಿಸಲಿದೆ’ ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಸೆಪ್ಟೆಂಬರ್ 22ರೊಳಗೆ ಸರ್ಕಾರದ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.