
ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನಿನ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕೋಕಾ (ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ–2000) ಹೇರಿಕೆಯನ್ನು ಪ್ರಶ್ನಿಸಲಾಗಿದ್ದ ರಿಟ್ ಅರ್ಜಿಯಲ್ಲಿ ಪ್ರಕರಣದ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಮಧ್ಯಂತರ ಕ್ರಿಮಿನಲ್ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಕೋರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸಿ ಆದೇಶಿಸಿತು. ಆದರೆ, ಇದೇ ವೇಳೆ ಕೋಕಾ ಕಾಯ್ದೆ ಹೇರಿಕೆ ನಿರ್ಧಾರವನ್ನು ರದ್ದುಪಡಿಸಿತು.
ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರ ವಾದವನ್ನು ಪುರಸ್ಕರಿಸಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾಯಪೀಠ, ‘ಯೋಗ್ಯತೆ (ಮೆರಿಟ್) ಆಧಾರಿತ ಅಂಶಗಳ ಬಗ್ಗೆ ಪ್ರತಿಪಾದಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿದೆಯಾದರೂ ಅಲ್ಲಿಯವರೆಗೂ ಬಂಧನದಿಂದ ರಕ್ಷಣೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ.
ಕೋಕಾ: ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಕೋಕಾ ಕಾಯ್ದೆ–2000 ಕಲಂ 2(1)(ಡಿ) ಅನುಸಾರ ಸಂಘಟಿತ ಅಪರಾಧ ಕೂಟ ರಚನೆ ಮಾಡಿಕೊಂಡಿರಬೇಕು ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರಬೇಕು. ಆದರೆ, ಅರ್ಜಿದಾರರು ಸಂಘಟಿತ ಅಪರಾಧದ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಪ್ರಾಸಿಕ್ಯೂಷನ್ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ಕೋಕಾ ಹೇರಿರುವ ಸಿಐಡಿ ನಿಲುವು ಕಾನೂನು ಮಾನ್ಯತೆ ಹೊಂದಿಲ್ಲ’ ಎಂಬ ವಾದಾಂಶವನ್ನು ನ್ಯಾಯಪೀಠ ಪುರಸ್ಕರಿಸಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಈ ಸಂಬಂಧ ನಗರದ ಮೆಯೋ ಹಾಲ್‌ನಲ್ಲಿರುವ 10ನೇ ಎಸಿಎಂಎಂ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.