ADVERTISEMENT

ಬಿಕ್ಲು ಶಿವು ಕೊಲೆ ಪ್ರಕರಣ: ಪೀಡಕ ಪದ ಬಳಕೆಗೆ ಕೆರಳಿದ ಪ್ರಾಸಿಕ್ಯೂಟರ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:56 IST
Last Updated 27 ಜನವರಿ 2026, 15:56 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ನನ್ನ ಮೇಲೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಪರ್ಸಿಕ್ಯೂಟರ್‌ (ಪೀಡಕ) ಎಂದು ದಾಳಿ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಏನು ನಡೆದಿದೆ ಎಂಬುದರ ಎಲ್ಲಾ ಅಂಶಗಳನ್ನು ಕೋರ್ಟ್‌ ಮುಂದೆ ತೆರೆದಿಡುತ್ತೇನೆ. ಯಾವುದನ್ನೂ ಗೋಪ್ಯವಾಗಿರಿಸಲು ತಯಾರಿಲ್ಲ’ ಎಂದು ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ ಆರೋಪಿ ಶಾಸಕ ಬೈರತಿ ಬಸವರಾಜ ಪರ ವಕೀಲರಿಗೆ ಹೈಕೋರ್ಟ್‌ನಲ್ಲಿ ಸವಾಲೆಸೆದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ADVERTISEMENT

ಐದನೇ ಆರೋಪಿ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ ಪರ ‍ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ, ‘ಬೈರತಿ ಅವರು ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿ, ಮಧ್ಯಂತರ ಜಾಮೀನು ‘ಪಡೆದುಕೊಂಡಿದ್ದಾರೆ’. ಈ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ನಿಷ್ಫಲಗೊಳಿಸಿದ್ದಾರೆ ಎಂಬ ಪ್ರಾಸಿಕ್ಯೂಷನ್‌ ಆರೋಪ ಸರ್ವಥಾ ಸರಿಯಲ್ಲ. ಕೋರ್ಟ್‌ ಮಧ್ಯಂತರ ಜಾಮೀನನ್ನು ‘ಮಂಜೂರು ಮಾಡಿದೆ’ ಎಂದು ಹೇಳಬೇಕೇ ವಿನಃ ‘ಪಡೆದುಕೊಳ್ಳಲಾಗಿದೆ’ ಎಂದು ಸಂಬೋಧಿಸಬಾರದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ನ್ಯಾಯಸಮ್ಮತವಾಗಿಲ್ಲ ಎಂದೆನಿಸಿದರೆ ಸಿಐಡಿ ತನಿಖಾಧಿಕಾರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಅದು ಬಿಟ್ಟು ಅರ್ಜಿದಾರರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಪ್ರಾಸಿಕ್ಯೂಟರ್‌, ಪ್ರಾಸಿಕ್ಯೂಟರ್‌ ಮಾದರಿಯಲ್ಲಿರಬೇಕು. ಅದು ಬಿಟ್ಟು ಪರ್ಸಿಕ್ಯೂಟರ್‌ ಆಗಿರಬಾರದು’ ಎಂದು ಅಸಮಾಧಾನ ಹೊರಹಾಕಿದರು.

ಈ ಮಾತಿಗೆ ಕೆರಳಿ ಎದ್ದು ನಿಂತ ಬಿ.ಎನ್‌.ಜಗದೀಶ್‌, ‘ನನ್ನ ವಾದಾಂಶಗಳೆಲ್ಲವನ್ನೂ ನಾನು ಪ್ರತಿಪಾದಿಸಲು ಸಿದ್ಧನಿದ್ದೇನೆ. ಯಾವುದನ್ನೂ ಮುಚ್ಚಿಡಲು ತಯಾರಿಲ್ಲ’ ಎಂದು ಕಿಡಿ ಕಾರಿದರು.

‘ಅರ್ಜಿದಾರರು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಈ ಹಿಂದೆಯೇ ವಜಾಗೊಳಿಸಿದೆ. ಇದಾದ ನಂತರವೂ ಪುನಃ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಯಾವುದೇ ಬದಲಾದ ಪರಿಸ್ಥಿತಿ ಇಲ್ಲದಿರುವ ಕಾರಣ ಈ ಅರ್ಜಿ ಊರ್ಜಿತವಾಗುವುದಿಲ್ಲ. ಬಿಕ್ಲು ಶಿವು ತಾಯಿಯ ಮೇಲೆ ಒತ್ತಡ ಹೇರಿ ಮಾಧ್ಯಮ ಹೇಳಿಕೆ ಕೊಡಿಸಲಾಗಿದೆ. ಹಾಗಾಗಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ದಿನದ ಕಲಾಪದ ಅವಧಿ ಮುಗಿಯುತ್ತಿದ್ದ ಕಾರಣ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಜ.28) ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.