ADVERTISEMENT

‘ಆಲಮಟ್ಟಿ, ಹಿಡಕಲ್‌ನಲ್ಲಿ ಪಕ್ಷಿಧಾಮಕ್ಕೆ ಯೋಜನೆ’

‘ಬಹು ಹಂತಗಳ ಬೆಳೆ’ ಯೋಜನೆ ಜಾರಿ: ಸಚಿವ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 19:30 IST
Last Updated 16 ಫೆಬ್ರುವರಿ 2019, 19:30 IST
ದಾಂಡೇಲಿಯ ಸರ್ಕಾರಿ ಮರಮುಟ್ಟುಗಳ ಕೋಠಿಯಲ್ಲಿ ಸ್ಥಾಪಿಸಲಾದ ಹಾರ್ನ್ ಬಿಲ್ ಪುತ್ಥಳಿ.
ದಾಂಡೇಲಿಯ ಸರ್ಕಾರಿ ಮರಮುಟ್ಟುಗಳ ಕೋಠಿಯಲ್ಲಿ ಸ್ಥಾಪಿಸಲಾದ ಹಾರ್ನ್ ಬಿಲ್ ಪುತ್ಥಳಿ.   

ದಾಂಡೇಲಿ (ಉತ್ತರ ಕನ್ನಡ): ವಿಜಯಪುರ ಜಿಲ್ಲೆಯ ಆಲಮಟ್ಟಿ ಹಾಗೂ ಬೆಳಗಾವಿ ಜಿಲ್ಲೆಯ ಹಿಡಕಲ್‌ ಅಣೆಕಟ್ಟೆಯ ಬಳಿ ಪಕ್ಷಿಧಾಮ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ‘ಹಾರ್ನ್ ಬಿಲ್ ಹಕ್ಕಿ ಹಬ್ಬ’ವನ್ನು (ಮಂಗಟ್ಟೆ ಹಕ್ಕಿ) ಉದ್ಘಾಟಿಸಿ ಅವರು ಮಾತನಾಡಿದರು.

ಕಾಡಿನಸಂ‍ಪತ್ತನ್ನು ಹೆಚ್ಚಿಸುವ ಹಾಗೂ ರಕ್ಷಿಸುವ ಸಲುವಾಗಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅರಣ್ಯಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸುವ ಚಿಂತನೆಯಿದೆ. ಪಶ್ಚಿಮ ಘಟ್ಟದಆಚೆಗೂ ಹಸಿರು ಹೆಚ್ಚಬೇಕು ಎಂದು ಅವರು ಆಶಿಸಿದರು.

ADVERTISEMENT

ಕಾಡಿನ ಪ್ರಾಣಿ, ಪಕ್ಷಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಹು ಹಂತಗಳ ಬೆಳೆ ಯೋಜನೆಯನ್ನು ಜಾರಿ ಮಾಡಲಾಗುವುದು.ಪ್ರತಿ ಜಿಲ್ಲೆಯಲ್ಲೂ ಒಂದು ಮೃಗಾಲಯ ಸ್ಥಾಪಿಸುವ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಇದರ ಭಾಗವಾಗಿ ಬೆಳಗಾವಿ ಜಿಲ್ಲೆಗೆ₹ 50 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಹಬ್ಬದ ಪ್ರಯುಕ್ತ ‘ಹಾರ್ನ್ ಬಿಲ್‌’ ಪರಿಚಯಿಸುವ ಪುಸ್ತಕ ಲೋಕಾರ್ಪಣೆ, ‘ತಿಂಗಳ ಹಕ್ಕಿ ಲೋಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿರುವ ಸಿಂಹಬಾಲದ ಸಿಂಗಳೀಕಗಳ ಕುರಿತು ಸಾಕ್ಷ್ಯಚಿತ್ರವನ್ನೂ ಇದೇ ವೇಳೆ ಸಚಿವರು ಬಿಡುಗಡೆ ಮಾಡಿದರು. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.