ADVERTISEMENT

ಬಿಟ್ ಕಾಯಿನ್‌: ಎಫ್‌ಬಿಐ ತಂಡ ರಾಜ್ಯಕ್ಕೆ ಬಂದಿಲ್ಲ ಎಂದ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:44 IST
Last Updated 9 ಏಪ್ರಿಲ್ 2022, 20:44 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ‘ಬಿಟ್ ಕಾಯಿನ್ ಪ್ರಕರಣದ ತನಿಖೆಗಾಗಿ ಎಫ್‌ಬಿಐ ಅಧಿಕಾರಿಗಳ ತಂಡಕರ್ನಾಟಕಕ್ಕೆ ಬಂದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಹಿರಿಯ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಫ್‌ಬಿಐ ಅಧಿಕಾರಿಗಳು ಬಂದಿಲ್ಲ ಎನ್ನುವುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಜನರ ಗಮನ ಬೇರೆಡೆಗೆ ಸೆಳೆಯಲು ಅವರು ಈ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಕರ್ನಾಟಕದ ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆದ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ಎಫ್‌ಬಿಐ ಭಾರತದಲ್ಲಿದೆಯೇ? ಹಾಗಿದ್ದರೆ, ತನಿಖೆ ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ಶಂಕಿತರ ವಿವರಗಳನ್ನು ಬಿಡುಗಡೆ ಮಾಡುವಿರಾ’ ಎಂದು ಟ್ವೀಟ್‌ ಮೂಲಕ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದರು.

ADVERTISEMENT

ಕೇಂದ್ರದ ಏಜೆನ್ಸಿಯಿಂದ ತನಿಖೆ: ಶಾಲೆಗಳಿಗೆ ಬಾಂಬ್ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ‘ಈ ಬಗ್ಗೆ ಕೇಂದ್ರದ ತನಿಖಾ
ಏಜೆನ್ಸಿ ತನಿಖೆ ನಡೆಸುತ್ತಿದೆ’ ಎಂದು ಹೇಳಿದರು.

‘ಅಲ್‌ ಕೈದಾ ಸಂಘಟನೆ ಹರಿಯಬಿಟ್ಟ ವಿಡಿಯೊದ ಹಿನ್ನೆಲೆಯಲ್ಲಿ ನಮ್ಮ ದೇಶದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೇವೆ. ಮಂಡ್ಯದ ಹೆಣ್ಣು ಮಗಳ ಬಗ್ಗೆ ಎಲ್ಲಿಂದಲೊ ವಿಡಿಯೊ ಹರಿಯಬಿಡಲಾಗಿದೆ. ಈ ಪ್ರಕರಣವನ್ನು
ಗಂಭೀರವಾಗಿ ತೆಗೆದುಕೊಂಡಿದ್ದೇವೆ’ ಎಂದರು.

‘ಮುಳಬಾಗಿಲಿನಲ್ಲಿ ಶೋಭಾಯಾತ್ರೆ ನಡೆಯುತ್ತಿದ್ದಾಗ ವಿದ್ಯುತ್‌ ಕಡಿತವಾಗಿತ್ತು. ಆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದರು.

ಪರಪ್ಪನ ಅಗ್ರಹಾರದಲ್ಲಿ ಆರೋಪಿ ಖಾತೆಯಿಂದ ಜೈಲು ಅಧಿಕಾರಿಗಳು ಹಣ ಪಡೆದ ಆರೋಪ ಕುರಿತು ಮಾತನಾಡಿದ ಅವರು, ‘ಹಣದ ವ್ಯವಹಾರ ಮತ್ತು ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಈಗಾಗಲೇ ಹಲವು ಪ್ರಕರಣದಲ್ಲಿ ಕ್ರಮ ಕೈಗೊಂಡಿದ್ದು, ಈ ವಿಚಾರದಲ್ಲೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಂದ್ರಶೇಖರಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕೆ ದೂರು ನೀಡಲು ಕಾಂಗ್ರೆಸ್ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜಾರ್ಜ್ ಫರ್ನಾಂಡಿಸ್, ವಾಜಪೇಯಿ ಅವರನ್ನು ಜೈಲಿಗೆ ಕಳುಹಿಸಿದ್ದರು.ನಮ್ಮನ್ನೂ ಜೈಲಿನಲ್ಲಿಟ್ಟಿದ್ದರು. ಈಗ ಅವರ ಕೈಯಲ್ಲಿ (ಕಾಂಗ್ರೆಸ್‌) ಏನೂ ಇಲ್ಲ.
ಹೀಗಾಗಿ ಬರೀ ದೂರು ಕೊಡುತ್ತಿದ್ದಾರೆ. ಕೊಡಲಿ, ಆದರೆ ಕಾನೂನುಪ್ರಕಾರ ಕ್ರಮಕೈಗೊಳ್ಳಲಿ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.