ADVERTISEMENT

ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿಯ ‘ಬಿಟ್‌ಕಾಯಿನ್’ ಕಳವು

ದಿನಕ್ಕೆ ₹85.24 ಲಕ್ಷ ದುಡಿಯುತ್ತಿದ್ದ ತಂಡ

ಸಂತೋಷ ಜಿಗಳಿಕೊಪ್ಪ
Published 15 ನವೆಂಬರ್ 2021, 20:35 IST
Last Updated 15 ನವೆಂಬರ್ 2021, 20:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಪಿಯು ಕಲಿಯುವಾಗಲೇ ‘ಬಿಟ್‌ಕಾಯಿನ್ (ಬಿಟಿಸಿ)’ ಕುರಿತು ತಿಳಿದುಕೊಂಡಿದ್ದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಬಿ.ಎಸ್ಸಿ ವ್ಯಾಸಂಗಕ್ಕಾಗಿ ನೆದರ್ಲೆಂಡ್ಸ್‌ಗೆ ಹೋಗಿದ್ದಾಗ 2014ರಲ್ಲಿ ₹22.31 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು (ನ. 15ರ ಮಾರುಕಟ್ಟೆ ಮೌಲ್ಯ ₹95.75 ಕೋಟಿ) ಗಳಿಸಿದ್ದ. ಬಿಟಿಸಿ ವ್ಯವಹಾರದ ಅತ್ಯಗತ್ಯ ಮಾಹಿತಿಯುಳ್ಳ ಲ್ಯಾಪ್‌ಟಾಪ್‌ ಕಳವಾಗಿದ್ದರಿಂದ, ಎಲ್ಲ ಬಿಟ್ ಕಾಯಿನ್‌ಗಳನ್ನು ಆತ ಕಳೆದುಕೊಂಡಿದ್ದ.

ಈ ಸಂಗತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಬಿಟಿಟಿ ಮಾಹಿತಿಯುಳ್ಳ ಲ್ಯಾಪ್‌ಟಾಪ್‌ನ್ನು ತನ್ನ ಕಾರು ಚಾಲಕ ಕಳವು ಮಾಡಿದ್ದ ಘಟನೆ ಬಗ್ಗೆ ಶ್ರೀಕೃಷ್ಣ ಹೇಳಿಕೆ ನೀಡಿದ್ದು, ಅದರ ವಿವರವನ್ನು ಆರೋಪ ಪಟ್ಟಿಯೊಂದಿಗೆ ಲಗತ್ತಿಸಲಾಗಿದೆ.

‘ಐಷಾರಾಮಿ ಜೀವನ ಬಯಸುತ್ತಿದ್ದ ಶ್ರೀಕೃಷ್ಣ, ಅದಕ್ಕೆ ಹಣ ಹೊಂದಿಸಲು ಯತ್ನಿಸುತ್ತಿದ್ದ. ಹೀಗಾಗಿ, ಹಣ ವಿನಿಮಯ ಏಜೆನ್ಸಿ ಹಾಗೂ ಜಾಲತಾಣಗಳನ್ನು ಹ್ಯಾಕಿಂಗ್ ಮಾಡುತ್ತಿದ್ದ. ದತ್ತಾಂಶ ಅಳಿಸುವುದಾಗಿ ಬೆದರಿಸಿ ಬಿಟ್‌ಕಾಯಿನ್ ರೂಪದಲ್ಲಿ ಹಣ ಸುಲಿಗೆ ಮಾಡುತ್ತಿದ್ದ.’

ADVERTISEMENT

‘ನೆದರ್ಲೆಂಡ್ಸ್‌ಗೆ ಹೋದಾಗ ಆತನಿಗೆ, ಟಿಮ್ ಕಮೇರ್ ಹಾಗೂ ಇಡು ಡ್ರೈಸ್ಸೆನ್‌ ಅವರ ಸ್ನೇಹ ಬೆಳೆದಿತ್ತು. ಮೂವರು ಸೇರಿಕೊಂಡು ಅರೆಕಾಲಿಕವಾಗಿ ಬಿಟ್‌ಕಾಯಿನ್‌ ವಿನಿಮಯ ಕೆಲಸಕ್ಕೆ ಕೈ ಜೋಡಿಸಿದ್ದರು. ಸ್ಥಳೀಯ ಏಜೆನ್ಸಿಯೊಂದರ ಜೊತೆ ಸೇರಿ ನೆದರ್ಲೆಂಡ್ ಹಾಗೂ ಅಕ್ಕ–ಪಕ್ಕದ ದೇಶಗಳಿಗೆ ಸುತ್ತಾಡುತ್ತಿದ್ದ ಮೂವರು, ಬಿಟ್ ಕಾಯಿನ್‌ ಖರೀದಿ ಹಾಗೂ ಮಾರಾಟ ಮಾಡಿಸುತ್ತಿದ್ದರು. ಅದಕ್ಕೆ ಉತ್ತಮ ಕಮಿಷನ್ ಬರುತ್ತಿತ್ತು. ದಿನಕ್ಕೆ ₹ 85.24 ಲಕ್ಷ ದುಡಿಯುತ್ತಿದ್ದರು. ಅದೇ ಹಣವನ್ನು ಶ್ರೀಕೃಷ್ಣ, ಬಿಟ್‌ಕಾಯಿನ್‌ಗೆ ಬದಲಾಯಿಸಿಟ್ಟುಕೊಂಡಿದ್ದ. ಅದರ ಪ್ರೈವೇಟ್ ಕೀ, ಸೆಕ್ಯುರಿಟಿ ಕೀ ಹಾಗೂ ಇತರೆ ಮಾಹಿತಿಯನ್ನು ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

ಲ್ಯಾಪ್‌ಟಾಪ್‌ ಕದ್ದಿದ್ದ ಕಾರು ಚಾಲಕ: ‘ಹಣ ವಿನಿಮಯ ಕೆಲಸಕ್ಕಾಗಿ ಸುತ್ತಾಡಲು ಶ್ರೀಕೃಷ್ಣ, ಸ್ನೇಹಿತರೊಬ್ಬರ ಕಾರು ಬಳಸುತ್ತಿದ್ದ. ಆತನಿಗೆ ಕಾರು ಚಾಲಕ ವಾಲಿದ್ ಅತ್ತಾದೌಲ್ ಪರಿಚಯವಾಗಿತ್ತು. ಇಬ್ಬರೂ ಹಲವು ನಗರ, ದೇಶಗಳಲ್ಲಿ ಸುತ್ತಾಡಿದ್ದರು. ಇಬ್ಬರ ನಡುವೆ ಆತ್ಮಿಯತೆ ಬೆಳೆದಿತ್ತು.’

‘ಶ್ರೀಕೃಷ್ಣ ಒಂದು ದಿನ ಮನೆಯ ಕಾರಿನಲ್ಲಿ ಕೀ ಮರೆತು ಹೋಗಿದ್ದ. ಅದೇ ಕೀ ವಾಲಿದ್‌ಗೆ ಸಿಕ್ಕಿತ್ತು. ಕೀ ಬಳಸಿ ಶ್ರೀಕೃಷ್ಣನಿಗೆ ಗೊತ್ತಿಲ್ಲದಂತೆ ಮನೆಗೆ ನುಗ್ಗಿದ್ದ ವಾಲಿದ್, ಪಾಸ್‌ಪೋರ್ಟ್, 2 ಲ್ಯಾಪ್‌ಟಾಪ್, ನಗದು, ಹಾರ್ಡ್‌ಡಿಸ್ಕ್‌, 2 ಕ್ಯಾಮೆರಾ ಕದ್ದೊಯ್ದಿದ್ದ’ ಎಂಬ ಅಂಶ ಪಟ್ಟಿಯಲ್ಲಿದೆ.

‘ಕಳ್ಳತನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ನೆದರ್ಲೆಂಡ್ಸ್‌ ಪೊಲೀಸರು, ವಾಲಿದ್‌ನನ್ನು ಬಂಧಿಸಿದ್ದರು. ಆದರೆ, ಆತನಿಂದ ಲ್ಯಾಪ್‌ಟಾಪ್‌ ವಾಪಸು ಸಿಕ್ಕಿರಲಿಲ್ಲ. ಆ ಲ್ಯಾಪ್‌ಟಾಪ್‌ನಲ್ಲಿ ₹22.31 ಕೋಟಿ ಮೌಲ್ಯದ ಹಣದ ಬಿಟಿಸಿ ದಾಖಲೆಗಳು ಇದ್ದವು. ಲ್ಯಾಪ್‌ಟಾಪ್‌ ಕಳವಾಗಿದ್ದರಿಂದ ಬಿಟ್ ಕಾಯಿನ್‌ಗಳು ಶ್ರೀಕೃಷ್ಣನಿಗೆ ವಾಪಸು ಸಿಗಲೇ ಇಲ್ಲ’ ಎಂಬ ಮಾಹಿತಿಯೂ ಇದೆ.

‘ಜಾಲತಾಣದಲ್ಲೇ ವ್ಯವಹಾರ ತರಬೇತಿ ನೀಡುತ್ತಿದ್ದ ಶ್ರೀಕಿ’

‘ನೆದರ್‌ಲೆಂಡ್ಸ್‌ ಏಜೆನ್ಸಿಯೊಂದು ಬಿಟ್‌ಕಾಯಿನ್‌ ಮಾರಾಟಗಾರರು, ಖರೀದಿದಾರರನ್ನುಜಾಲತಾಣಗಳ ಮೂಲಕ ಸಂಪರ್ಕಿಸುತ್ತಿತ್ತು. ಗ್ರಾಹಕರ ಮಾಹಿತಿಯನ್ನು ಶ್ರೀಕೃಷ್ಣ ಹಾಗೂ ಸ್ನೇಹಿತರಿಗೆ ನೀಡುತ್ತಿತ್ತು. ಶ್ರೀಕೃಷ್ಣ, ಗ್ರಾಹಕರಿಗೆ ಬಿಟ್‌ಕಾಯಿನ್ ವರ್ಗಾವಣೆ ಮಾಡಿಕೊಡುತ್ತಿದ್ದ. ನಿರ್ವಹಣೆಗೆ ಬೇಕಾದ ತರಬೇತಿ ನೀಡುತ್ತಿದ್ದ’ ಎಂದು ಪೊಲೀಸ್
ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.