ADVERTISEMENT

ಹಗರಣ ಮುಚ್ಚಿಹಾಕಲು ಬಿಜೆಪಿಯಿಂದ ನನ್ನ ಮಗನ ಹೆಸರು ಪ್ರಸ್ತಾಪ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 12:11 IST
Last Updated 18 ನವೆಂಬರ್ 2021, 12:11 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು‌ ಬಿಜೆಪಿ ನಾಯಕರು ಅಗಲಿರುವ ನನ್ನ‌ ಮಗನ ಹೆಸರು ಎಳೆದು ತರುತ್ತಿದ್ದಾರೆ. ಆದರೆ, ಬಿಟ್‌ಕಾಯಿನ್‌ ಹಗರಣದಲ್ಲಿ ಬಿಜೆಪಿ ನಾಯಕರ ಮಕ್ಕಳ ಹೆಸರುಗಳೇ ಇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಟ್ ಕಾಯಿನ್ ಹ್ಯಾಕರ್ ಶ್ರೀಕೃಷ್ಣನ(ಶ್ರೀಕಿ) ಜೊತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಗಾಢ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ & ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ. ಇಲ್ಲಿ ನೋಡಿ, ಸುನೀಶ್ ಹೆಗ್ಡೆ ಮತ್ತು ಹೇಮಂತ್ ಯಾರ ಜೊತೆಗಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕವು ತನ್ನ ಟ್ವಿಟರ್‌ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿತ್ತು. ಇದರಲ್ಲಿ ರಾಕೇಶ್‌ ಸಿದ್ದರಾಮಯ್ಯ ಜೊತೆಗೆ ಹೇಮಂತ್‌ ಮುದ್ದಪ್ಪ ಮತ್ತು ಸುನೀಶ್‌ ಹೆಗ್ಡೆ ಇದ್ದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭ್ರಷ್ಟಾಚಾರ ಮುಚ್ಚಿಹಾಕಲು‌ ಬಿಜೆಪಿಯು ಅಗಲಿ ಹೋಗಿರುವ ನನ್ನ‌ ಮಗನ ಹೆಸರನ್ನು ಎಳೆದು ತಂದಿದೆ. ಸರಿ, ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ‌ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಖ್ಯಮಂತ್ರಿಗಳನ್ನು ನಾನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

‘ನನ್ನ ಮಗ ರಾಕೇಶ್ ನಮ್ಮನಗಲಿ ಐದು ವರ್ಷಗಳಾಗಿವೆ. ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಬಿಜೆಪಿ ದಿವಂಗತ ರಾಕೇಶ್‌ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು ಅತ್ಯಂತ ವೈಯಕ್ತಿಕ‌ ಮತ್ತು ಕ್ಷುಲಕತನದ' ರಾಜಕಾರಣ,‘ ಎಂದಿದ್ದಾರೆ.

ಪ್ರಧಾನಿ ಜೊತೆಗಿರುವ ನೀರವ್‌ ಮೋದಿಯ ಫೋಟೊವನ್ನು ಹೇಗೆ ವ್ಯಾಖ್ಯಾನಿಸುವುದು?

‘ರಾಕೇಶ್ ಜೊತೆಗೆ ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಹಾಗಿದ್ದರೆ 2018ರಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ‌ ಶೃಂಗ ಸಭೆಯಲ್ಲಿ‌ ಪ್ರಧಾನಿ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಫೋಟೊವನ್ನು ಹೇಗೆ ವ್ಯಾಖ್ಯಾನಿಸುವುದು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

‘ಶ್ರೀಕೃಷ್ಣನ ಜೊತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜೊತೆ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದು, ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್ ಕಾಯಿನ್ ಪಡೆದಿದ್ದ ಎಂಬ ಆರೋಪ ಇದೆ. ಆ ನಾಯಕ ಯಾರೆಂದು‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್ ಕಟೀಲ್‌ ಅವರಿಗೆ ಗೊತ್ತಿರಬಹುದೇನೋ?’ ಎಂದು ಕೇಳಿದ್ದಾರೆ.

ನನ್ನ ಕೈಯಲ್ಲಿ ಪುರಾವೆಗಳಿಲ್ಲದ ಕಾರಣ ನಾನು ಇಲ್ಲಿಯ ವರೆಗೆ ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ ಬಿಜೆಪಿ ಸರ್ಕಾರವೇ ಸಲ್ಲಿಸಿರುವ ಆರೋಪ‌ ಪಟ್ಟಿಯಲ್ಲಿರುವ ವಿಷಯವನ್ನಷ್ಟೇ ಹೇಳುತ್ತಿದ್ದೇನೆ. ಈ ವರೆಗಿನ ಪೊಲೀಸರ ತನಿಖೆ ಯಾರೋ ಪ್ರಭಾವಿಗಳನ್ನು ರಕ್ಷಿಸಲು ನಡೆಸಿರುವ ನಾಟಕದಂತಿದೆ.

‘ನಮ್ಮ ಬುಟ್ಟಿಯಲ್ಲಿ ಹಾವು ಇಲ್ಲ‌ ಎಂದಾದರೆ ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ? ಯಾಕೆ ಸರತಿ‌ ಸಾಲಲ್ಲಿ ನಿಂತು ಹೆಗಲು‌ ಮುಟ್ಟಿ ನೋಡಿಕೊಂಡು ‘ಸರ್ಕಾರ ತಪ್ಪು‌ಮಾಡಿಲ್ಲ’ ನಾವೆಲ್ಲ ನಿರಪರಾಧಿಗಳು' ಎಂದು ಎದೆ ಬಡಿದು ಕೊಳ್ಳುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ಮಕ್ಕಳಿದ್ದಾರೆ...

ಬಿಟ್ ಕಾಯಿನ್ ಹಗರಣದಲ್ಲಿ‌ ಬಿಜೆಪಿ ನಾಯಕರ ಮಕ್ಕಳ ಹೆಸರೂ ಕೇಳಿ ಬರುತ್ತಿವೆ. ಪುರಾವೆಗಳಿಲ್ಲದೆ‌ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದೆಂದು ಸುಮ್ಮನಿದ್ದೇನೆ. ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರಿಗೆಲ್ಲ‌ ಕಚ್ಚಲಿದೆಯೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.