ADVERTISEMENT

ನಿಲ್ಲದ ‘ಆಪರೇಷನ್‌’ ಮೈತ್ರಿಗೆ ತಪ್ಪದ ತಳಮಳ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 19:52 IST
Last Updated 9 ಫೆಬ್ರುವರಿ 2019, 19:52 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ಆಡಿಯೊ ಬಾಂಬ್‌’ ಸಿಡಿಸಿದ ಬಳಿಕವೂ ‘ಆಪರೇಷನ್ ಕಮಲ’ ಯತ್ನ ಎಂದಿನಂತೆ ಮುಂದುವರಿದಿದ್ದು, ಜೆಡಿಎಸ್–ಕಾಂಗ್ರೆಸ್ ಮಿತ್ರಕೂಟದ ನಾಯಕರನ್ನು ತಳಮಳಕ್ಕೆ ದೂಡಿದೆ.

‘ಶಾಸಕತ್ವ ಅನರ್ಹಗೊಳಿಸುವ ಶಿಸ್ತುಕ್ರಮದ ಎಚ್ಚರಿಕೆ’ಯನ್ನು ನೀಡಿದ ನಂತರವೂ ಬಿಜೆಪಿ ತೆಕ್ಕೆಯಲ್ಲಿದ್ದಾರೆ ಎನ್ನಲಾಗುತ್ತಿರುವ ನಾಲ್ವರು ಕಾಂಗ್ರೆಸ್ ಶಾಸಕರು ಇನ್ನೂ ಅಡಗುದಾಣದಲ್ಲೇ ಉಳಿದಿದ್ದಾರೆ. ಅವರ ಜತೆ ಇನ್ನಷ್ಟು ಜನರನ್ನು ಕೂಡಿಸಿಕೊಂಡು ಬುಧವಾರದ (ಫೆ.13) ಹೊತ್ತಿಗೆ ರಾಜೀನಾಮೆ ಪರ್ವ ಆರಂಭಿಸುವುದು ಬಿಜೆಪಿ ನಾಯಕರ ರಣವ್ಯೂಹ ಎಂದು ಹೇಳಲಾಗುತ್ತಿದೆ.

‘ಬಹುಕೋಟಿ ಆಮಿಷವೊಡ್ಡಿ ಶಾಸಕರನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ ಎಂಬ ಸುಳ್ಳು ಆಪಾದನೆಯನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಸುಖಾಸುಮ್ಮನೆ ಆರೋಪ ಎದುರಿಸುವುದಕ್ಕಿಂತ ಶಾಸಕರಿಂದ ರಾಜೀನಾಮೆ ಕೊಡಿಸಿ, ಒಂದು ಕೈ ನೋಡಿಯೇ ಬಿಡುವುದು ಈಗಿನ ಆಲೋಚನೆ. ಈ ನಿಟ್ಟಿನಲ್ಲಿ ನಾಯಕರು ಕಾರ್ಯಪ್ರವೃತ್ತರಾಗಿರುವುದು ಹೌದು’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ADVERTISEMENT

‘ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲ ಎಂದು ಅನೇಕ ಶಾಸಕರು ಬಹಿರಂಗವಾಗಿ ಹೇಳಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಕೂಡ ಇದೇ ಧೋರಣೆ ಹೊಂದಿದ್ದಾರೆ. ಮೈತ್ರಿ ಸರ್ಕಾರದ ಮೇಲೆ ಕಾಂಗ್ರೆಸ್ ಶಾಸಕರು ವಿಶ್ವಾಸ ಕಳೆದುಕೊಂಡಿರುವುದು ರಹಸ್ಯವಾಗಿ ಉಳಿದಿಲ್ಲ. ಲೋಕಸಭೆ ಚುನಾವಣೆ ನಂತರ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂಬುದು ಅನೇಕ ಶಾಸಕರ ಅರಿವಿಗೆ ಬಂದಿದೆ’ ಎಂದೂ ಹೇಳಿದರು.

*ಬಿಜೆಪಿ ಆಪರೇಷನ್ ಕಮಲ ಮುಂದುವರಿಸಿದೆ. ಶುಕ್ರವಾರ ಒಬ್ಬ ಶಾಸಕರನ್ನು, ಶನಿವಾರ ಮತ್ತೊಬ್ಬ ಶಾಸಕರನ್ನು ಸಂಪರ್ಕಿಸಿರುವುದು ಗಮನಕ್ಕೆ ಬಂದಿದೆ

-ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.