ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಎನ್‌ಕೌಂಟರ್ ಮಾಡಿ ಕೊಲ್ಲಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು. ದೇವರ ದಯೆಯಿಂದ ನಾವು ಅವರನ್ನು ಕಾಪಾಡಿಕೊಂಡಿದ್ದೇವೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದರು.
ಸಿ.ಟಿ. ರವಿ ಬಂಧನ ಖಂಡಿಸಿ ನಗರದಲ್ಲಿ ಬಿಜೆಪಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಒಂದು ತಾಸು ಸಂಚಾರ ಬಂದ್ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಕಿಡಿ ಕಾರಿದರು.
‘ಸಿ.ಟಿ.ರವಿ ಅವರನ್ನು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೂ ವಿನಾಕಾರಣ ಸುತ್ತಿಸಿದ್ದಾರೆ. ರಾಮದುರ್ಗ ಹೊರವಲಯದ ದೊಡ್ಡ ಕಂದಕವೊಂದರಲ್ಲಿ ರಾತ್ರಿ ವಾಹನ ನಿಲ್ಲಿಸಿ ಎನ್‌ಕೌಂಟರ್ ಮಾಡಲು ಯತ್ನಿಸಿದ್ದಾರೆ. ಆದರೆ, ಅವರ ವಾಹನವನ್ನು ಬೆನ್ನಟ್ಟಿದ ಬಿಜೆಪಿಯ ನಾಯಕರು ಅದನ್ನು ತಪ್ಪಿಸಿದ್ದಾರೆ’ ಎಂದೂ ಆರೋಪಿಸಿದರು.
‘ಪ್ರತಿ ಅರ್ಧ ತಾಸಿಗೂ ಕಾಂಗ್ರೆಸ್‌ನ ಒಬ್ಬ ನಾಯಕ ಪೊಲೀಸರಿಗೆ ಫೋನ್ ಮಾಡಿ ನಿರ್ದೇಶನ ನೀಡಿದ್ದಾನೆ. ಕಾಂಗ್ರೆಸ್‌ನ ಏಜೆಂಟರಂತೆ ಪೊಲೀಸರು ವರ್ತಿಸಿದ್ದಾರೆ. ತಮ್ಮನ್ನು ಕೊಲೆ ಮಾಡುವ ಹತ್ನ ನಡೆಸಲಾಯಿತು ಎಂದು ರವಿ ಅವರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ’ ಎಂದೂ ಹೇಳಿದರು.
‘ಹಿಂದೆ ಬಿಹಾರದಲ್ಲಿ ಲಾಲೂಪ್ರಸಾದ್ ಎಂಬ ಮನೆಹಾಳ ಇದ್ದ. ಇಲ್ಲಿರುವುದು ಅವನದೇ ಶಿಷ್ಯರ ಸರ್ಕಾರ. ಕರ್ನಾಟಕವನ್ನೂ ಇವರು ಬಿಹಾರ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ್ದಾರೆ. ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದರು.
‘ನಗರ ಪೊಲೀಸ್ ಕಮಿಷನರ್ ನೀನೇಕೆ ಖಾನಾಪುರ ಠಾಣೆಗೆ ಬಂದೆ? ನಿನಗೇನು ಅಧಿಕಾರ ಇದೆ ಅಲ್ಲಿ? ಯಾರ ಮಾತು ಕೇಳಿ ಪ್ರಭಾವ ಬೀರಲು ಬಂದಿದ್ದೆ ಗೊತ್ತು ಕಣಯ್ಯ’ ಎಂದೂ ದೂರಿದರು.
‘ಈ ರಾಜ್ಯದಲ್ಲಿ ವಿಧಾನಸೌಧ, ಸುವರ್ಣ ವಿಧಾನಸೌಧದಲ್ಲೇ ಸುರಕ್ಷತೆ ಇಲ್ಲ. 40 ಜನ ಸುವರ್ಣ ಸೌಧಕ್ಕೆ ಹೇಗೆ ನುಗ್ಗಿದರು? ಪೊಲೀಸರು ಹೇಗೆ ಒಳಗೆ ಬಿಟ್ಟಿರಿ? ರವಿ ಅವರನ್ನು ಕೊಲೆ ಮಾಡಿ, ಬಾಡಿಯನ್ನು ಚಿಕ್ಕಮಗಳೂರಿಗೆ ಪಾರ್ಸಲ್ ಮಾಡುತ್ತೇನೆ ಎಂದು ಗೂಂಡಾಗಳು ಸೌಧದೊಳಗೆ ಬೆದರಿಕೆ ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಇವರು ರಕ್ಷಿಸಿದರು. ದಾಖಲೆ ನೋಡಿ, ವಿಧಿವಿಜ್ಷಾನ ವರದಿ ಬಂದ ಮೇಲೆ ಎಫ್‌ಐಆರ್ ದಾಖಲಿಸಿದರು. ಆದರೆ, ರವಿ ಅವರಂಥ ಜನಪ್ರತಿನಿಧಿ, ಹಿಂದೂ ಹೋರಾಟಗಾರರನ್ನು ನೇರವಾಗಿ ಬಂಧಿಸಿದ್ದಾರೆ’ ಎಂದೂ ದೂರಿದರು.
‘ಸಿದ್ದರಾಮಯ್ಯ ಅವರೇ ನೀವು ಹೊರನಡೆದಿರುವ ಮುಖ್ಯಮಂತ್ರಿ. ಈ ಅಧಿಕಾರ ರೊಟ್ಟಿ ತಿರುವು ಹಾಕಿದಷ್ಟೇ ಸುಲಭ. ಪ್ರಕರಣದ ಬಗ್ಗೆ ಬಹಿರಂಗ ಹೇಳಿಕೆ ನೀಡಲು ನೀನ್ಯಾರು. ನೀನೇನು ನ್ಯಾಯಧೀಶನಾ?’ ಎಂದು ಪ್ರಶ್ನಿಸಿದರು.
‘ಮುಖ್ಯಮಂತ್ರಿ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಮ್ಮ ಗತಿ ಏನಾಗುತ್ತದೆ ನೋಡಿಕೊಳ್ಳಿ’ ಎಂದೂ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ,ವಿಜಯೇಂದ್ರ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಅಧಿಕಾರ ದುರ್ಬಳಕೆ ಹೇಗೆ ಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಇದು ಉದಾಹರಣೆ. ರೈತರ ಮೇಲೆ, ಪಂಚಮಸಾಲಿ ಸಮುದಾದಯ ಮೇಲೆ ಸಿದ್ದರಾಮಯ್ಯ ಲಾಠಿ ಪ್ರಹಾರ ಮಾಡಿಸಿದರು. ಕಾಂಗ್ರೆಸ್‌ನ ಗೂಂಡಾಗಳೂ ಸೌಧದ ಒಳಗೇ ಬಂದು ಸಿ.ಟಿ.ರವಿ ಮೇಲೆ ಹಲ್ಲೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಂಧಿಸಿದ ನಂತರ ರಾತ್ರಿಯಿಡೀ 500 ಕಿ.ಮೀ. ಸುತ್ತಾರಿಸಿದ್ದಾರೆ. ಗದಗ, ಧಾರವಾಡ, ರಾಮದುರ್ಗ ಮುಂತಾದ ಕಡೆ ಓಡಾಡಿಸಿ ಅವರನ್ನು ಹೆದರಿಸಿದ್ದಾರೆ. ಇದೇನು ಹಿಟ್ಲರ್ ಸರ್ಕಾರವೇ’ ಎಂದೂ ಕಿಡಿ ಕಾರಿದರು.
‘ಸಿ.ಟಿ. ರವಿ ಅವರ ಮೇಲಿನ ಹಲ್ಲೆ ಸಿಬಿಐ ತನಿಖೆಯಾಗಬೇಕು’ ಎಂದೂ ಆಗ್ರಹಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಅಭಯ ಪಾಟೀಲ ಮಾತನಾಡಿ, ‘ಸಿ.ಟಿ. ರವಿ ಅವರನ್ನು 100 ಅಡಿ ಆಳದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಕರೆದೊಯ್ದು ಎನ್‌ಕೌಂಟರ್ ಮಾಡಲು ಯತ್ನಿಸಿದ್ದಾರೆ. ಅವರನ್ನು ಗುರುವಾರ ರಾತ್ರಿ ಇಡೀ ಹಿಂಸಿಸಲಾಗಿದೆ. ಊಟ, ನೀರು ಕೊಡದೇ ಹೊಡೆದಿದ್ದಾರೆ. ಅವರ ತಲೆ ಒಡೆದು ರಕ್ತ ಸೋರುತ್ತಿದ್ದರೂ ಚಿಕಿತ್ಸೆ ಕೊಡಿಸಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.