ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾತ್ರಿ ವೇಳೆ ನಡೆಯುವ ಕೋಲ, ನೇಮೋತ್ಸವ, ಯಕ್ಷಗಾನ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ದೂರಿದರು.
ಶೂನ್ಯವೇಳೆಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಅವರು ಈ ವಿಷಯ ಪ್ರಸ್ತಾಪಿಸಿದರು.
‘ನಮ್ಮ ಪ್ರದೇಶದಲ್ಲಿ ಹಬ್ಬದ ದಿನಗಳಲ್ಲಿ ಪೊಲೀಸರು ತುಂಬಾ ತೊಂದರೆ ಕೊಡುತ್ತಿದ್ದಾರೆ. ಕೋಲ, ಯಕ್ಷಗಾನ, ಮೊಸರುಕುಡಿಕೆ, ಹುಲಿ ವೇಷ ಇತ್ಯಾದಿಗಳಲ್ಲಿ ಮೈಕ್‌ಗಳನ್ನು ಬಳಸಲು ಬಿಡುತ್ತಿಲ್ಲ. ಹಾಕಿದರೆ ಶಬ್ಧದ ಮಿತಿ ಹೆಚ್ಚಾಯಿತು ಎಂದು ಮೈಕ್‌ಗಳನ್ನು ಕಿತ್ತುಕೊಂಡು ಹೋಗಿ ಆಯೋಜಕರು ಮತ್ತು ಸೌಂಡ್ ಸಿಸ್ಟಂ ನಿರ್ವಹಿಸುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಹೇಳಿದರು.
‘ರಾತ್ರಿ 10.30 ರ ಬಳಿಕ ಯಾವುದೇ ಕಾರ್ಯಕ್ರಮ ನಡೆಸಬಾರದು ಎನ್ನುತ್ತಾರೆ. ಕೋಲ ಮತ್ತು ನೇಮೋತ್ಸವಗಳು ನಡೆಯುವುದೇ ರಾತ್ರಿ ವೇಳೆ. ಇದಕ್ಕೆ ನ್ಯಾಯಾಲಯದ ಆದೇಶವನ್ನು ಪ್ರಸ್ತಾಪಿಸಿ ಇಂತಹ ಉತ್ಸವಗಳಿಗೆ ಅವಕಾಶ ನೀಡುತ್ತಿಲ್ಲ’ ಎಂದರು.
ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ‘ಉರೂಸ್ ಕೂಡಾ ರಾತ್ರಿ ವೇಳೆಯೇ ನಡೆಯುತ್ತದೆ. ಕಾನೂನು ಮತ್ತು ಸಂಪ್ರದಾಯ ಸಮತೋಲ ಮಾಡಿಕೊಂಡು ಹೋಗಬೇಕು. ಈ ಸಮಸ್ಯೆಗೆ ಸಕಾರಾತ್ಮಕವಾಗಿ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ’ ಎಂದು ಸಲಹೆ ನೀಡಿದರು.
‘ನಮ್ಮ ಜಿಲ್ಲೆಗಳಲ್ಲಿ ಹಬ್ಬ ಆಚರಿಸುವುದು ಎಂದರೆ ಸಾರ್ವಜನಿಕರಿಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಎಲ್ಲ ಸಮಾರಂಭಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕುವುದು ಕಡ್ಡಾಯ ಎಂದು ಪೊಲೀಸರು ಹೇಳುತ್ತಾರೆ. ಎಷ್ಟು ಹಾಕಿಸಲು ಸಾಧ್ಯವಾಗುತ್ತದೆ’ ಎಂದು ಬಿಜೆಪಿಯ ಭರತ್ ಶೆಟ್ಟಿ ಪ್ರಶ್ನಿಸಿದರು.
ಬಿಜೆಪಿಯ ಸುನಿಲ್‌ಕುಮಾರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಲಾ ಆವರಣದಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತದೆ. ಆದರೆ ಈಗ ಶಾಲಾ ಆವರಣದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ಇಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಸಭಾಧ್ಯಕ್ಷರ ಗಮನಕ್ಕೆ ತಂದರು.
‘ಕಾಂಗ್ರೆಸ್ ಸರ್ಕಾರವೇ ಇದಕ್ಕೆಲ್ಲ ಕಾರಣ’ ಎಂದು ವೇದವ್ಯಾಸ್ ಕಾಮತ್ ಅವರು ಹೇಳಿದ್ದು, ಕಾಂಗ್ರೆಸ್‌ನ ನರೇಂದ್ರಸ್ವಾಮಿ ಅವರನ್ನು ಕೆರಳಿಸಿತು. ‘ರಾತ್ರಿ 10.30 ಬಳಿಕ ಇಂತಹ ಆಚರಣೆ ನಡೆಸಬಾರದು ಎಂದು ಹೈಕೋರ್ಟ್ ಹೇಳಿದೆ. ನಿಮ್ಮ ಸರ್ಕಾರ ಇದ್ದಾಗ ಮಸೀದಿಗಳಲ್ಲಿ ರಾತ್ರಿ 10.30 ಬಳಿಕ ಆಜಾನ್ ಹಾಕಬಾರದು ಎಂದು ಆದೇಶ ಮಾಡಿದ್ದಿರಲ್ಲ’ ಎಂದು ಕಿಡಿಕಾರಿದರು.
‘ಹಾಗಿದ್ದರೆ ಈಗ ನೀವು ರಾತ್ರಿ 10.30 ರ ಬಳಿಕ ಆಜಾನ್ ನಿಲ್ಲಿಸುತ್ತೀರಾ? ಮಳವಳ್ಳಿಗೆ ಹೋಗಿ ಎಲ್ಲ ಮಸೀದಿಗಳಿಗೂ ಈ ಆದೇಶ ಮಾಡುತ್ತೀರಾ’ ಎಂದು ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರಶ್ನಿಸಿದಾಗ, ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಸಭಾಧ್ಯಕ್ಷ ಖಾದರ್ ಅವರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.