ADVERTISEMENT

ಅನಂತ್ ಮರೆತ ಬಿಜೆಪಿ: ಕಾರ್ಯಕರ್ತರಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 20:15 IST
Last Updated 30 ಜೂನ್ 2019, 20:15 IST
ಅನಂತ ಕುಮಾರ್‌
ಅನಂತ ಕುಮಾರ್‌   

ಬೆಂಗಳೂರು: ಎರಡೂವರೆ ದಶಕಗಳ ಕಾಲ ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ಬಿಜೆಪಿಯಲ್ಲಿ ತಮ್ಮದೇ ಆದ ಛಾಪು ಬೀರಿದ್ದ ದಿವಂಗತ ಅನಂತ ಕುಮಾರ್‌ ಅವರನ್ನು ರಾಜ್ಯ ಬಿಜೆಪಿ ಅತಿ ಬೇಗನೆ ಮರೆತು ಬಿಟ್ಟಿತೆ ಎಂಬ ಚರ್ಚೆ ಪಕ್ಷದೊಳಗೆ ಆರಂಭವಾಗಿದೆ.

ಇದಕ್ಕೆ ಕಾರಣ ಬೆಂಗಳೂರಿನಿಂದ ಆಯ್ಕೆಯಾದ ಮೂವರು ಸಂಸದರಿಗೆ ಶನಿವಾರ ಪಕ್ಷ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಬ್ಯಾನರ್‌ಗಳು ಮತ್ತು ವೇದಿಕೆಯಲ್ಲಿ ಅನಂತ ಕುಮಾರ್‌ ಅವರ ಒಂದೂ ಚಿತ್ರವನ್ನು ಹಾಕಿರಲಿಲ್ಲ. ಅನಂತ್ ಪತ್ನಿ ತೇಜಸ್ವಿನಿ ಅವರಿಗೂ ಆಹ್ವಾನ ನೀಡಿರಲಿಲ್ಲ ಎಂದು ಮೂಲಗಳು ಹೇಳಿವೆ.

ಬಿಜೆಪಿಯಲ್ಲಿ ವ್ಯಕ್ತಿ ಪೂಜೆಗೆ ಆದ್ಯತೆ ಇಲ್ಲ ಎಂಬುದು ನಿಜ. ಆದರೆ, ರಾಜ್ಯದಲ್ಲಿ ಬಿಜೆಪಿ ಕಟ್ಟುವ ಸಂದರ್ಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅನಂತ್ ಹೆಗಲು ನೀಡಿದ್ದರು. ಅಷ್ಟೇ ಅಲ್ಲದೆ, ರಾಜ್ಯದ ನೆಲ, ಜಲ, ಭಾಷೆ ವಿಚಾರ ಬಂದಾಗ ಸದಾ ಮುಂಚೂಣಿಯಲ್ಲಿ ನಿಂತು ರಾಜ್ಯ ಪರ ವಕಾಲತ್ತು ವಹಿಸಿದ್ದರು. ಆರು ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದ ನಾಯಕ ನಿಧನರಾದ ಅಲ್ಪ ಕಾಲದಲ್ಲಿಯೇ ಅವರಿಂದ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದವರಿಂದಲೇ ಕಡೆಗಣಿಸಲ್ಪಟ್ಟಿದ್ದಾರೆ ಎಂದು ಹೆಸರು ಹೇಳಲು ಬಯಸದ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆರ್‌.ಅಶೋಕ್‌ ಮತ್ತು ವಿ.ಸೋಮಣ್ಣ ಅವರು ಅನಂತ್‌ ಕುಮಾರ್‌ ಅವರಿಗೆ ಅತಿ ಆಪ್ತರು ಎನಿಸಿಕೊಂಡವರು. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆಯ ಹೋರ್ಡಿಂಗ್‌, ಆಹ್ವಾನ ಪತ್ರಿಕೆಯಲ್ಲಿ ಚಿತ್ರ ಹಾಕಿಸಲು ಮರೆತದ್ದು ಅವರಿಗೆ ಶೋಭೆ ತರುತ್ತದೆಯೇ ಎಂಬ ಕೆಲವು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಅನಂತ್‌ ಪತ್ನಿ ತೇಜಸ್ವಿನಿ ಅವರನ್ನು ಟಿಕೆಟ್‌ ಕೊಡಿಸುವುದಾಗಿ ಹೇಳಿ ಪಕ್ಷ ಮತ್ತು ಆರ್‌ಎಸ್ಎಸ್‌ ಮುಖಂಡರು ರಾಜಕೀಯಕ್ಕೆ ಕರೆ ತಂದರು. ಸಾಕಷ್ಟು ಅರ್ಹತೆ ಮತ್ತು ಸಮಾಜ ಸೇವೆಯ ಹಿನ್ನೆಲೆ ಇದ್ದರೂ ಪಕ್ಷದಲ್ಲಿ ಎಷ್ಟು ಆದ್ಯತೆ ಸಿಗಬೇಕಿತ್ತೊ ಅದು ಸಿಗುತ್ತಿಲ್ಲ ಎಂಬುದು ಕೆಲವು ಕಾರ್ಯಕರ್ತರ ಅಳಲು.

ತೇಜಸ್ವಿ ಸೂರ್ಯ ಮುಖ್ಯಮಂತ್ರಿ ಹಂಬಲ?: ಭಾಷಣಗಳಿಂದ ಖ್ಯಾತಿ ಪಡೆದಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರ ಅಭಿಮಾನಿ ಪಡೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಭಾವಿ ಮುಖ್ಯಮಂತ್ರಿ ಎಂಬಂತೆ ಬಿಂಬಿಸುತ್ತಿರುವುದು ಪಕ್ಷದ ಕಾರ್ಯಕರ್ತರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

‘ತೇಜಸ್ವಿ ಸೇರಿ ಈ ಬಾರಿ ಬಹುಪಾಲು ಸಂಸದರು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲೇ ಗೆದ್ದಿದ್ದಾರೆ. ಹಾಗೆಂದಾಕ್ಷಣ ಅಭಿಮಾನಿಗಳ ಮೂಲಕ ಭಾವಿ ಮುಖ್ಯಮಂತ್ರಿ ಎಂಬಂತೆ ಬಿಂಬಿಸಿಕೊಳ್ಳುವುದು ಸರಿಯಲ್ಲ. ಒಂದು ವೇಳೆ ಅವರ ಗಮನಕ್ಕೆ ಬಾರದೇ ಇಂತಹದ್ದು ನಡೆಯುತ್ತಿದ್ದರೆ, ಅಭಿಮಾನಿಗಳಿಗೆ ತಿಳಿ ಹೇಳಬೇಕು. ಇಲ್ಲವಾದಲ್ಲಿ, ಪಕ್ಷವನ್ನು ಕೆಳ ಮಟ್ಟದಿಂದ ಕಟ್ಟಿಕೊಂಡು ಬಂದ ಅಸಂಖ್ಯಾತ ಕಾರ್ಯಕರ್ತರಿಗೆ ಇದರಿಂದ ನೋವಾಗುತ್ತದೆ’ ಎಂಬುದಾಗಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.