ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸಿದ ವೇಳೆ ಅಂದಿನ ವಿರೋಧ ಪಕ್ಷದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಡಿದ್ದ ಮಾತುಗಳ ವಿಡಿಯೊ ತುಣುಕನ್ನು ‘ಎಕ್ಸ್’ ಮೂಲಕ ಹಂಚಿಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮುಖ್ಯಮಂತ್ರಿ ಅವರನ್ನು ಲೇವಡಿ ಮಾಡಿದ್ದಾರೆ.
‘ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ. ಅಧಿಕಾರ ಇದ್ದಾಗ ಹಗಲುವೇಷ ವಿರೋಧ ಪಕ್ಷದಲ್ಲಿದ್ದಾಗ ರೋಷಾವೇಶ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ. ನಿಮ್ಮ ದುರಾಡಳಿತಕ್ಕೆ ಜನಸಾಮಾನ್ಯರು ಯಾಕೆ ದಿನನಿತ್ಯ ಪರದಾಡಬೇಕು? ಸಾಕು ಮಾಡಿ ಈ ನಾಟಕ. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ’ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಆಗ ಹೇಳಿದ್ದೇನು?:
‘ಸಾರಿಗೆ ನೌಕರರ ಸಮಸ್ಯೆ ಕೇಳಲಿಲ್ಲ. ಇವತ್ತು ಅವರನ್ನು ಹೆದರಿಸಿ, ಬೆದರಿಸಿ ಎಸ್ಮಾ ತರ್ತೀವಿ, ಖಾಸಗಿ ಬಸ್ ಓಡಿಸ್ತೀವಿ, ಸರ್ಕಾರಿ ಬಸ್ ನಿಲ್ಲಿಸುತ್ತೀವಿ, ವರ್ಗ ಮಾಡ್ತೀವಿ ಎಂದು ಹೇಳ್ತಾರಲ್ಲ, ಯಡಿಯೂರಪ್ಪ ಏನಪ್ಪಾ ಕುರ್ಚಿ ಶಾಶ್ವತ ಅಂತ ತಿಳ್ಕೊಬುಟ್ಟಿದ್ದೇನ್ಯಪ್ಪಾ...’ ಎಂಬ ಸಿದ್ದರಾಮಯ್ಯನವರ ಮಾತು ಅಶೋಕ ಹಂಚಿಕೊಂಡಿರುವ ವಿಡಿಯೊದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.