ADVERTISEMENT

ಬಿಜೆಪಿಯಲ್ಲಿ ಬಣ ಬಿಕ್ಕಟ್ಟು ಉಲ್ಬಣ?: ಮಹತ್ವದ ನಿರ್ಣಯ ಪ್ರಕಟಿಸಲಿರುವ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 21:21 IST
Last Updated 26 ನವೆಂಬರ್ 2020, 21:21 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಣ ಮತ್ತು ಪಕ್ಷದ ವರಿಷ್ಠರಿಗೆ ನಿಷ್ಠರಾಗಿರುವ ಬಣಗಳ ಮಧ್ಯೆ ಕಂದಕ ಹಿಗ್ಗುತ್ತಲೇ ಇದ್ದು, ಆಂತರಿಕ ಬೆಳವಣಿಗೆ ಈಗ ಗಂಭೀರ ಬಿಕ್ಕಟ್ಟಿನತ್ತ ಸಾಗುವ ಲಕ್ಷಣ ಕಾಣಿಸಿದೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಬಿಜೆಪಿ ವರಿಷ್ಠರು ಸಮ್ಮತಿ ಸೂಚಿಸಿಲ್ಲ. ನಾಯಕತ್ವ ಬದಲಾವಣೆಯತ್ತಲೇ ಅವರ ದೃಷ್ಟಿ ಇದ್ದಂತಿದೆ. ಈ ತಾಕಲಾಟಗಳು ಪಕ್ಷದ ಆಂತರಿಕ ಬೇಗುದಿಯನ್ನು ಹೆಚ್ಚಿಸಿದ್ದು, ಇದು ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಸಂಪುಟದಲ್ಲಿರುವ ಕೆಲವು ‘ನಿಷ್ಕ್ರಿಯ’ ಸಚಿವರನ್ನು ಕೈಬಿಡುವುದು, ಸಂಪುಟ ಪುನಾರಚನೆ ಮಾಡುವುದು ಯಡಿಯೂರಪ್ಪ ಇಂಗಿತ. ಸಂಪುಟ ಪುನಾರಚನೆ ಸಂಬಂಧ ಪಕ್ಷದ ವರಿಷ್ಠರಿಂದ ಯಾವುದೇ ಸೂಚನೆ ಬರದೇ ಇರುವುದರಿಂದ ತಾವು ಕೊಟ್ಟು ಮಾತು ಉಳಿಸಿಕೊಳ್ಳಲು ಮುಂದಾಗಿರುವ ಯಡಿಯೂರಪ್ಪ, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವ ಮೂಲಕ ವರಿಷ್ಠರಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಹೀಗೊಂದು ವೇಳೆ ಸಚಿವರನ್ನು ಕೈಬಿಟ್ಟರೆ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರುವ ಸಂಭವವೂ ಇದೆ ಎಂದೂ ಹೇಳಲಾಗುತ್ತಿದೆ.

ಈ ಮಧ್ಯೆ, ಯಡಿಯೂರಪ್ಪ ಶುಕ್ರವಾರ (ನ.27) ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಭೆ ಬಳಿಕ ಅವರು ‘ಮಹತ್ವದ ನಿರ್ಣಯ’ ಪ್ರಕಟಿಸಲಿದ್ದಾರೆ. ಆ ನಿರ್ಣಯ ಯಡಿಯೂರಪ್ಪ ಅತ್ಯಾಪ್ತರಾದ ಇಬ್ಬರಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಬಿಜೆಪಿ ಸರ್ಕಾರ ಬಂದ ಮೇಲೆ ಸಂಪುಟ ಸಭೆಯ ಮಾಹಿತಿಯನ್ನು ಜೆ.ಸಿ. ಮಾಧುಸ್ವಾಮಿ ನೀಡುತ್ತಿದ್ದುದು ರೂಢಿ. ಮಹತ್ವದ ನಿರ್ಣಯ ಪ್ರಕಟಿಸುವ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರೇ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಗೆ ನಾಲ್ವರು ಸಚಿವರು ಗೈರಾಗಲಿದ್ದು, ಇವರಲ್ಲಿ ಮೂವರು ಸಚಿವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇವೆಲ್ಲದರ ಮಧ್ಯೆ ಮುಖ್ಯಮಂತ್ರಿಯವರು ತರಾತುರಿಯಲ್ಲಿ ಶುಕ್ರವಾರ ಸಂಜೆ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನೂ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಸಚಿವ ಸಂಪುಟ ಸಭೆಯ ಬಳಿಕ ಸಂಪುಟ ಸಹೋದ್ಯೋಗಿಗಳ ಜತೆ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಯಡಿಯೂರಪ್ಪ ಅನೌಪಚಾರಿಕವಾಗಿ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಆದರೆ, ಯಡಿಯೂರಪ್ಪ ಅವರು ಇನ್ನು ಮೂರರಿಂದ ನಾಲ್ಕು ದಿನಗಳೊಳಗೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಳಿಸಲಿದ್ದಾರೆ ಎಂಬುದಾಗಿ ಅವರ ಆಪ್ತ ವಲಯ ದೃಢ ವಿಶ್ವಾಸ ವ್ಯಕ್ತಪಡಿಸಿದೆ. ಸತತ ಮೂರನೇ ದಿನವೂ ವಿವಿಧ ನಿಗಮ–ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ತಾವು ಪಕ್ಷದಲ್ಲಿ ಇನ್ನೂ ಪ್ರಬಲ ಎಂಬ ನೇರ ಸಂದೇಶವನ್ನೂ ವರಿಷ್ಠರಿಗೆ ಯಡಿಯೂರಪ್ಪ ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

ದೆಹಲಿಯಲ್ಲಿ ಬೀಡು ಬಿಟ್ಟ ಸಚಿವರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಪೂಜೆ ಶುಕ್ರವಾರ ದೆಹಲಿಯಲ್ಲಿ ನಡೆಯಲಿದೆ.

ಆಪ್ತರ ಸಭೆ ನಡೆಸಿದ ಮುಖ್ಯಮಂತ್ರಿ
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಎರಡು ದಿನಗಳ ಪ್ರವಾಸ ಮುಗಿಸಿ ಗುರುವಾರ ಸಂಜೆ ನಗರಕ್ಕೆ ವಾಪಸಾದ ಯಡಿಯೂರಪ್ಪ ಪೂರ್ವನಿಗದಿತ ಸಭೆಗಳನ್ನು ರದ್ದುಪಡಿಸಿ, ಆಪ್ತ ಸಚಿವರ ಸಭೆ ನಡೆಸಿದರು.

ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ, ವಿ.ಸೋಮಣ್ಣ, ಬಿ.ಸಿ.ಪಾಟೀಲ, ಪ್ರಭು ಚವ್ಹಾಣ್‌, ಶಾಸಕ ಉಮೇಶ ಕತ್ತಿ, ಇನ್ನು ಕೆಲವು ಸಚಿವರು ಮತ್ತು ಬಿ.ವೈ.ವಿಜಯೇಂದ್ರ ಇದ್ದರು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಬಹುತೇಕ ವೀರಶೈವ–ಲಿಂಗಾಯತ ಸಚಿವರು, ಶಾಸಕರು ಇದ್ದರು.

ತಮ್ಮ ಬೆಂಬಲ ಕ್ರೋಡೀಕರಿಸುವ ಯತ್ನದ ಮುಂದುವರಿದ ಭಾಗ ಇದು ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.