ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಯನ್ನು ಭೇಟಿಯಾದ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದೇಶದ್ರೋಹಿಗಳು ಮತ್ತು ದೇಶದ್ರೋಹದ ಚಟುವಟಿಕೆಯಲ್ಲಿ ಪಾಲ್ಗೊಂಡವರ ಕೇಸ್‌ಗಳನ್ನು ಹಿಂಪಡೆಯುತ್ತಿದೆ. ಇನ್ನೊಂದು ಕಡೆ ಸ್ವಾಮೀಜಿಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಸ್ವಾಮೀಜಿಯವರ ಜತೆ ನಾವು ನಿಲ್ಲುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ಸ್ವಾಮೀಜಿಯವರು ಸಹಜ ಆಕ್ರೋಶದಿಂದ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಸರ್ಕಾರದಲ್ಲಿರುವವರು ಸ್ವಾಮೀಜಿಯವರಿಗೆ ಬೆದರಿಕೆ ಹಾಕುವುದು ಖಂಡಿತ ಸರಿಯಲ್ಲ. ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ತನಿಖೆಗೆ ಬರಲು ಒತ್ತಾಯಿಸುತ್ತಿದೆ ಎಂದು ಹೇಳಿದರು.
ಸ್ವಾಮೀಜಿಯವರ ಆರೋಗ್ಯ ಸರಿ ಇಲ್ಲದಿರುವ ವಿಚಾರ ತಿಳಿಸಿ ಅಗತ್ಯ ಉತ್ತರವನ್ನು ಪತ್ರದ ಮೂಲಕ ಕಳುಹಿಸಿದ್ದಾರೆ. ಆದರೂ ಖುದ್ದಾಗಿ ಹಾಜರಾಗುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ವಕ್ಫ್ ವಿಚಾರ ಮುಂದಿಟ್ಟುಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಮಠಗಳ ಜಮೀನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳ ಮೂಲಕ ನೋಟಿಸ್ ನೀಡುತ್ತಿದೆ. ಇದನ್ನು ವಿರೋಧಿಸಿ ಉಗ್ರ ಪ್ರತಿಭಟನೆ ನಡೆದಿದ್ದು, ರೈತರು ಬೀದಿಗೆ ಇಳಿದಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಕೆಲವು ಮುಖಂಡರು ದೊಡ್ಡ ಸಭೆ ಮಾಡಿ ನಾವು ಸುಪ್ರೀಂಕೋರ್ಟಿನ ಮುಂದೆ ಹೋಗಿ ಭಿಕ್ಷೆ ಬೇಡುವುದಿಲ್ಲ. ನಿಮಗೆ ಸಂಸತ್ ಇದ್ದರೆ, ನಮಗೆ ರಸ್ತೆಗಳಿವೆ. ನಾವೂ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ ನಿದರ್ಶನವಿದೆ. ಇದಕ್ಕೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಸ್ವಾಮೀಜಿ ಬಾಯಿ ತಪ್ಪಿ ಹೇಳಿದ್ದು, ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ ಮೇಲೆ ಪ್ರಕರಣ ಮುಂದುವರೆಸುವ ಅಗತ್ಯವಿದೆಯೇ? ನಿಮ್ಮ ಪಕ್ಕದಲ್ಲೇ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದವರನ್ನು ರಕ್ಷಿಸುತ್ತೀರಿ. ಸರ್ಕಾರ ದ್ವಿಮುಖ ನೀತಿ ಏಕೆ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಸ್ವಾಮೀಜಿ ಕ್ಷಮೆ ಕೇಳಿದರೂ ಕೇಸು ದಾಖಲಿಸಿದ್ದಾರೆ. ಆದರೆ, ದೇಶ ವಿರೋಧಿ ಶಕ್ತಿಗಳು, ಗಲಭೆ ಎಬ್ಬಿಸುವವರು, ಸೌಹಾರ್ದತೆ ಹಾಳು ಮಾಡುವವರ ವಿರುದ್ಧ ಯಾವುದೇ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.