ನವದೆಹಲಿ: ಸಂಸತ್ ಅಧಿವೇಶನದ ಮುಗಿದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಗೆ ದೌಡಾಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವರಿಷ್ಠರ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ಇಂಗಿತದಿಂದ ಶನಿವಾರ ಬಂದ ಅವರಿಗೆ ಉಭಯ ನಾಯಕರ ಭೇಟಿ ಸಾಧ್ಯವಾಗಲಿಲ್ಲ. ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಹಾಗೂ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದರು. ‘ಉಪರಾಷ್ಟ್ರಪತಿ ಚುನಾವಣೆ ಬಗ್ಗೆ ಪಕ್ಷದ ವರಿಷ್ಠರು ಗಮನ ಹರಿಸಿದ್ದು, ಅಲ್ಲಿಯವರೆಗೆ ರಾಷ್ಟ್ರ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ. ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯ ಘಟಕದ ಚುನಾವಣೆ ಪ್ರಕ್ರಿಯೆ ಮುಗಿಸಲಾಗುವುದು’ ಎಂದು ಅಗರವಾಲ್ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
‘ಪಕ್ಷದಲ್ಲಿ ಉಂಟಾದ ಗೊಂದಲದಿಂದ ಸಂಘಟನೆ ಕಾರ್ಯಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಈಗ ಸಂಘಟನೆಗೆ ಚುರುಕು ನೀಡಲಾಗಿದೆ. ‘ಮನೆ ಮನೆಗೆ ತ್ರಿವರ್ಣ’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿಜಯೇಂದ್ರ ಅವರು ಅಗರವಾಲ್ ಗಮನಕ್ಕೆ ತಂದರು.
ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆಯನ್ನು ಪಕ್ಷ ಆರಂಭಿಸಿದೆ. ಪಕ್ಷದ ಸಂವಿಧಾನದ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಸಲು ಕನಿಷ್ಠ 19 ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಪ್ರಸ್ತುತ 27 ರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ. ಆದರೆ, ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ ಹಾಗೂ ಹರಿಯಾಣದಲ್ಲಿ ಪ್ರಕ್ರಿಯೆ ಕಗ್ಗಂಟಾಗಿದೆ. ಈ ರಾಜ್ಯಗಳಲ್ಲಿ ಅಧ್ಯಕ್ಷರ ನೇಮಕವಾದ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಲು ವರಿಷ್ಠರು ಆಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯೇಂದ್ರ ಮುಂದುವರಿಕೆಗೆ ಭಿನ್ನರ ಬಣ ಹಾಗೂ ತಟಸ್ಥರ ಬಣ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ತಟಸ್ಥ ಬಣದವರು ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಭಿನ್ನಮತೀಯ ನಾಯಕರ ಅಹವಾಲನ್ನು ಪ್ರಲ್ಹಾದ ಜೋಶಿ ಆಲಿಸಿದ್ದಾರೆ. ಈ ನಡುವೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ರಾಜ್ಯ ಘಟಕದ ಅಧ್ಯಕ್ಷರಾಗಲು ಸದ್ದಿಲ್ಲದೆ ಪ್ರಯತ್ನ ಮುಂದುವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.