ADVERTISEMENT

ಕಾಂಗ್ರೆಸ್ ಸಂಸದ ಇ. ತುಕಾರಾಂ ಅನರ್ಹಗೊಳಿಸಲು ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:48 IST
Last Updated 14 ಜುಲೈ 2024, 15:48 IST
ಇ. ತುಕಾರಾಂ
ಇ. ತುಕಾರಾಂ   

ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ಬಳಕೆ ಮಾಡಿಕೊಂಡು ಸಂಸದರಾಗಿ ಆಯ್ಕೆಯಾದ ಇ.ತುಕಾರಾಂ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಪಿ.ರಾಜೀವ್‌ ಒತ್ತಾಯಿಸಿದ್ದಾರೆ.

ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಅವರು ಭಾನುವಾರ ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಅಕ್ರಮ ಹಣ ಬಳಸಿ ಚುನಾವಣೆ ಗೆದ್ದಿರುವ ತುಕಾರಾಂ ಅವರು ಸಂಸತ್ತಿನ ಒಳಗೆ ಒಂದು ಕ್ಷಣ ಕುಳಿತುಕೊಳ್ಳಲು ನೈತಿಕ ಮೌಲ್ಯವನ್ನು ಕಳೆದುಕೊಂಡಿದ್ದಾರೆ ಎಂದರು.

ADVERTISEMENT

ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿ ಬಂಧಿತರಾಗಿರುವ ನಾಗೇಂದ್ರ ಅವರು ಜಾರಿ ನಿರ್ದೇಶನಾಲಯದ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್‌ ಅರ್ಜಿಯಲ್ಲಿ ಚುನಾವಣೆಗೆ ₹29.19 ಕೋಟಿ ಬಳಕೆ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ನಾಗೇಂದ್ರ ಅವರು ₹29.19 ಕೋಟಿಯನ್ನು ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿದಕ್ಕೆ ದಾಖಲೆ ಸಿಕ್ಕಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಮತ್ತು ಕುಮ್ಮಕ್ಕು ಇಲ್ಲದೇ ಈ ಹಣವನ್ನು ಬಳಸಲು ಸಾಧ್ಯವೇ ಎಂದು ರಾಜೀವ್‌ ಪ್ರಶ್ನಿಸಿದರು.

ಆದ್ದರಿಂದ, ಚುನಾವಣಾ ಅಕ್ರಮದ ಕುರಿತು ಇನ್ನಷ್ಟು ಆಳವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಬಡವರ ಹಣವನ್ನು ಚುನಾವಣೆಗೆ ಬಳಸಿಕೊಂಡು ಯಾರು ಸಂಸದರಾಗಿ ಆಯ್ಕೆಯಾಗಿದ್ದಾರೋ ಅವರ ಆಯ್ಕೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.