ADVERTISEMENT

ಎಸ್‌ಸಿ, ಎಸ್‌ಟಿ ಜತೆಗಿರುವ ಕ್ರಿಶ್ಚಿಯನ್ ಪದ ತೆಗೆಯಲು ಆಗ್ರಹ: ಬಿಜೆಪಿಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 15:44 IST
Last Updated 23 ಸೆಪ್ಟೆಂಬರ್ 2025, 15:44 IST
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರನ್ನು ಭೇಟಿ ಮಾಡಿದ ಛಲವಾದಿ ನಾರಾಯಣಸ್ವಾಮಿ, ವಿ.ಸುನಿಲ್‌ಕುಮಾರ್‌, ಎ. ನಾರಾಯಣಸ್ವಾಮಿ, ಎನ್‌.ರವಿಕುಮಾರ್‌, ಎನ್‌.ಮಹೇಶ  ಅವರು ಮನವಿ ಸಲ್ಲಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರನ್ನು ಭೇಟಿ ಮಾಡಿದ ಛಲವಾದಿ ನಾರಾಯಣಸ್ವಾಮಿ, ವಿ.ಸುನಿಲ್‌ಕುಮಾರ್‌, ಎ. ನಾರಾಯಣಸ್ವಾಮಿ, ಎನ್‌.ರವಿಕುಮಾರ್‌, ಎನ್‌.ಮಹೇಶ  ಅವರು ಮನವಿ ಸಲ್ಲಿಸಿದರು.   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗಳ ಅಡಿ ಬರುವ 14 ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಅಡಿ ಬರುವ 1 ಜಾತಿಯ ಜತೆ ‘ಕ್ರಿಶ್ಚಿಯನ್‌’ ಪದ ಸೇರಿಸಿರುವುದನ್ನು ಕೈಬಿಡಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.

ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಮತ್ತು ಇತರರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು.

‘ಜಾತಿಪಟ್ಟಿಯಲ್ಲಿ 48 ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಇತ್ತು. ಈ ಪಟ್ಟಿಯಲ್ಲಿ 14 ಪರಿಶಿಷ್ಟ ಜಾತಿಗಳು ಮತ್ತು 1 ಪರಿಶಿಷ್ಟ ಪಂಗಡದ (ವಾಲ್ಮೀಕಿ) ಜಾತಿಗಳೂ ಇದ್ದವು. ಇದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾದ ಸಂದರ್ಭದಲ್ಲಿ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದೇ 21ರಂದು ಆಯೋಗದ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ 33 ಹಿಂದೂ ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲಿ ಕಾಣದಂತೆ ಮಾಡಿರುವುದಾಗಿ ಹೇಳಿದ್ದರು. ಆದರೆ, ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆ’ ಎಂದು ನಿಯೋಗ ತಿಳಿಸಿದೆ.

ADVERTISEMENT

ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ, ಬಂಜಾರ, ಬುಡುಗ ಜಂಗಮ, ಹೊಲೆಯ, ಲಮಾಣಿ, ಲಂಬಾಣಿ, ಮಾದಿಗ, ಮಹಾರ್, ಮಾಲಾ, ಪರಯ, ವಡ್ಡ, ವಾಲ್ಮೀಕಿ ಈ ಜಾತಿಗಳ ಜತೆಗಿನ ಕ್ರಿಶ್ಚಿಯನ್‌ ಪದಗಳನ್ನು ತೆಗೆದಿಲ್ಲ. ಸಮೀಕ್ಷೆ ಆ್ಯಪ್‌ನಲ್ಲಿ ಅವುಗಳ ಕಾಣದಂತೆ ಮಾಡುವ ಕುರಿತು ತಕ್ಷಣವೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದೆ.

ಆ್ಯಪ್‌ನಲ್ಲೂ ಸೇರಿಸಿಲ್ಲ: ಆಯೋಗ ಸ್ಪಷ್ಟನೆ

‘ಸಲಹೆ ಮತ್ತು ಚರ್ಚೆಯ ನಂತರ ಹಲವು ಜಾತಿಗಳ ಹೆಸರುಗಳನ್ನು ಅಂತಿಮಪಟ್ಟಿಯಲ್ಲಿ ಕೈಬಿಡಲಾಗಿದೆ. ಆ್ಯಪ್‌ನಲ್ಲೂ ಸೇರಿಸಿಲ್ಲ’ ಎಂದು ಹಿಂದುಳಿದ ವರ್ಗಗಳ ಆಯೋಗ ಹೇಳಿದೆ.  ಬಿಜೆಪಿ ನಿಯೋಗದ ಭೇಟಿಯ ಬಳಿಕ ಆಯೋಗದ ಸದಸ್ಯ ಕಾರ್ಯದರ್ಶಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಮೀಕ್ಷಾ ಕೈಪಿಡಿ–2025ರ ಪುಟ ಸಂಖ್ಯೆ 57ರಿಂದ 89ರವರೆಗಿನ 1561 ಜಾತಿಗಳ ಪಟ್ಟಿಯಲ್ಲಿ ಹಾಗೂ ಇಡಿಸಿಎಸ್‌ ಸಂಸ್ಥೆಯು ಸಿದ್ಧಪಡಿಸಿರುವ ಸಮೀಕ್ಷಾ ಆ್ಯಪ್‌ನಲ್ಲಿ ಅಳವಡಿಸಿರುವ ಜಾತಿ ಪಟ್ಟಿಯ ಡ್ರಾಪ್‌ ಡೌನ್‌ನಲ್ಲಿಯೂ ‘ಕ್ರಿಶ್ಚಿಯನ್‌’ ಪದ ಸೇರಿದ್ದ ಆದಿ ಆಂಧ್ರ ಆದಿ ಕರ್ನಾಟಕ ಆದಿ ದ್ರಾವಿಡ ಬಂಜಾರ ಬುಡುಗ ಜಂಗಮ ಹೊಲೆಯ ಲಮಾಣಿ ಲಂಬಾಣಿ ಮಾದಿಗ ಮಹಾರ್ ಮಾಲಾ ಪರಯ ವಡ್ಡ ವಾಲ್ಮೀಕಿ ಜಾತಿಗಳನ್ನು ಕೈಬಿಡಲಾಗಿದೆ ಎಂಬ ಅಂಶ ಖಚಿತಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.