ADVERTISEMENT

ಸಂಪುಟ ರಚನೆಗೆ ವರಿಷ್ಠರ ಸೂಚನೆ?

ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 20:00 IST
Last Updated 4 ಆಗಸ್ಟ್ 2019, 20:00 IST
   

ಬೆಂಗಳೂರು: ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಹೊಸ ಸಚಿವರ ಪ್ರಮಾಣ ವಚನಕ್ಕೆ ಬಿಜೆಪಿ ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ.

ಸಂಸತ್‌ ಕಲಾಪ ಮತ್ತು ಕಾಶ್ಮೀರದ ವಿದ್ಯಮಾನಗಳ ಮಧ್ಯೆಯೂ ರಾಜ್ಯ ಸಚಿವ ಸಂಪುಟ ರಚನೆಗೆ ಸಚಿವರ ಪಟ್ಟಿಗೆ ಇನ್ನೆರಡು ದಿನಗಳಲ್ಲಿ ವರಿಷ್ಠರು ಹಸಿರು ನಿಶಾನೆ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿ ಸಚಿವ ಸ್ಥಾನಕ್ಕಾಗಿ 40 ರಿಂದ 50 ಶಾಸಕರ ಹೆಸರನ್ನು ನೀಡಿದ್ದರೂ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮದೇ ಮೂಲಗಳಿಂದ ಸಂಭಾವ್ಯ ಸಚಿವರ ಬಗ್ಗೆ ಮಾಹಿತಿಗಳನ್ನು ತರಿಸಿಕೊಂಡು ಪೂರ್ವಾಪರ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಆರ್‌ಎಸ್‌ಎಸ್‌ ಮುಖಂಡರಿಂದಲೂ ಮಾಹಿತಿ ಪಡೆದುಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ADVERTISEMENT

ಮೊದಲ ಹಂತದಲ್ಲಿ 10 ರಿಂದ 15 ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ಸಿಗಬಹುದು. ಕಾಂಗ್ರೆಸ್‌– ಜೆಡಿಎಸ್‌ನಲ್ಲಿ ಬಂಡಾಯವೆದ್ದು ಅನರ್ಹಗೊಂಡ ಶಾಸಕರಿಗೆ 12 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪು ಬಂದ ಬಳಿಕ ಈ ಕುರಿತು ತೀರ್ಮಾನ ತೆಗೆದುಕೊಳ್ಳಬಹುದು ಎನ್ನಲಾಗಿದೆ.

‘ಈ ಬಾರಿ ಲಿಂಗಾಯತ ಕೋಟಾದಲ್ಲೂ ಸಚಿವರ ಸಂಖ್ಯೆ ಕಡಿಮೆ ಆಗಬಹುದು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಸೇರಿದ್ದರು ಎಂಬ ಕಾರಣಕ್ಕೆ ಕುರುಬರ ಕೋಟಾದಲ್ಲಿ ಹೆಚ್ಚಿನವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಅದೇ ರೀತಿ ಯಡಿಯೂರಪ್ಪ ಲಿಂಗಾಯತರಾಗಿರುವ ಕಾರಣ, ಅದೇ ಸಮುದಾಯಕ್ಕೆ ಸೇರಿದ ಶಾಸಕರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವ ಸಾಧ್ಯತೆ ಕಡಿಮೆ’ ಎನ್ನಲಾಗಿದೆ.

ನಿಗಮ– ಮಂಡಳಿಗಳಿಗೆ ಶೇ 80 ರಷ್ಟು ಶಾಸಕರಿಗೂ, ಉಳಿದ ಶೇ 20 ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ಸಚಿವ ಸಂಪುಟ ರಚನೆಯ ಬಳಿಕ ವ್ಯವಸ್ಥೆ ಸರಿ ದಾರಿಗೆ ಹೋದ ಬಳಿಕ ನಿಗಮ–ಮಂಡಳಿಗಳತ್ತ ಗಮನಹರಿಸಬಹುದು. ಇದಕ್ಕೆ ಇನ್ನು ಕೆಲವು ತಿಂಗಳಾದರೂ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಯೋಜನಾ ಆಯೋಗಕ್ಕೆ ಹಿರಿಯರು

ರಾಜ್ಯ ಯೋಜನಾ ಆಯೋಗಕ್ಕೆ ಬೆಂಗಳೂರಿನ ಹಿರಿಯ ಶಾಸಕರೊಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಿದ್ದು, ಇದರಿಂದ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಲು ಸಾಧ್ಯವಾಗುತ್ತದೆ ಎಂಬ ಮಾತೂ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.

ಈ ಹಿಂದೆ ಎರಡೆರಡು ಬಾರಿ ಮಂತ್ರಿಗಳಾಗಿ ಕೆಲಸ ಮಾಡಿದವರಿಗೇ ಮತ್ತೆ ಮಣೆ ಹಾಕಿದರೆ, ಹಲವು ಬಾರಿ ಗೆದ್ದೂ ದಕ್ಷತೆ ಹೊಂದಿರುವವರನ್ನು ಕೈಬಿಡುವುದು ಸರಿಯಲ್ಲ. ಈ ಬಾರಿ ಅವರಿಗೆ ಅವಕಾಶ ನೀಡಿದರೆ, ಮುಂದೆ ಪಕ್ಷಕ್ಕೂ ಅನುಕೂಲವಾಗುತ್ತದೆ ಎಂಬ ಚರ್ಚೆಯೂ ನಡೆದಿದೆ.

ಅಧ್ಯಕ್ಷ ಸ್ಥಾನಕ್ಕೆ ಶೋಭಾ ಹೆಸರು?

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹೆಸರೂ ಮುನ್ನಲೆಗೆ ಬಂದಿದೆ. ಈಗಾಗಲೇ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಸುನಿಲ್‌ ಕುಮಾರ್‌ ಅವರ ಹೆಸರು ಚಾಲ್ತಿಯಲ್ಲಿಯತ್ತು ಶೋಭಾ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ.

ಆಕ್ರಮಣಕಾರಿ ಪ್ರವೃತ್ತಿ, ಶ್ರಮವಹಿಸುವ ಸಾಮರ್ಥ್ಯವನ್ನು ವರಿಷ್ಠರು ಗಮನಕ್ಕೆ ತೆಗೆದುಕೊಂಡಿದ್ದು, ಶೋಭಾಗೆ ನೀಡುವ ಮೂಲಕ ರಾಜ್ಯದಲ್ಲಿ ಮಹಿಳೆಗೆ ಆದ್ಯತೆ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.