
ಬೆಂಗಳೂರು: ಮುಂಬೈ ಮಹಾನಗರದ ಜನತೆ ಬಿಜೆಪಿಯನ್ನು ಬೆಂಬಲಿಸಿದಂತೆ, ಜಿಬಿಎ ವ್ಯಾಪ್ತಿಯ ಎಲ್ಲ ಐದು ನಗರ ಪಾಲಿಕೆಗಳ ಚುನಾವಣೆಯಲ್ಲೂ ಬೆಂಗಳೂರಿನ ಜನತೆ ಬಿಜೆಪಿಗೆ ದೊಡ್ಡ ಮಟ್ಟದ ಆಶೀರ್ವಾದ ಮಾಡಲಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪತನದ ಹಾದಿ ಆರಂಭವಾಗುವುದು ನಿಶ್ಚಿತ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಈಗ ಮಹಾರಾಷ್ಟ್ರದ ಪ್ರತಿಷ್ಠಿತ ಬಿಎಂಸಿ, ಪುಣೆ, ನಾಗ್ಪುರ ಮತ್ತು ರಾಜ್ಯದ ಎಲ್ಲಾ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟ ಮತ್ತೊಮ್ಮೆ ಅಭೂತಪೂರ್ವ ಜಯಭೇರಿ ಬಾರಿಸಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಕೇಂದ್ರದ ಎನ್‌ಡಿಎ ಸರ್ಕಾರ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳನ್ನು ಮೆಚ್ಚಿ ಜನತೆ ಗೆಲುವು ತಂದುಕೊಟ್ಟಿದ್ದಾರೆ’ ಎಂದರು.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಜಯಭೇರಿ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿಯ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಹರೀಶ್ ಮಾತನಾಡಿ ಮಹಾರಾಷ್ಟ್ರದ ಜನತೆ ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಗೆಲ್ಲಿಸಿದ್ದಾರೆ. ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಇವಿಎಂ ಹ್ಯಾಕ್ ಆಗಿದೆ ಎಂದು ಗೋಳಾಟ ಶುರು ಮಾಡಿದೆ. ಕೇರಳದ ತಿರುವನಂತರಪುರದಲ್ಲೂ ನಾವು ಗೆದ್ದಿದ್ದೇವೆ. ದೇಶದ ಉದ್ದಗಲ ಜನತೆಗೆ ಬಿಜೆಪಿಗೆ ಮನ್ನಣೆ ನೀಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.