ADVERTISEMENT

2023ರ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭಿಸಿದ ಬಿಜೆಪಿ

7 ಜನೋತ್ಸವ, 100 ಕ್ಷೇತ್ರಗಳಲ್ಲಿ ಬೊಮ್ಮಾಯಿ, ಕಟೀಲ್ ಪ್ರವಾಸ l ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 21:54 IST
Last Updated 18 ಆಗಸ್ಟ್ 2022, 21:54 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಪಾಲ್ಗೊಂಡಿದ್ದರು
ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಪಾಲ್ಗೊಂಡಿದ್ದರು   

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಪ್ರಚಾರದ ಅಲೆ ಎಬ್ಬಿಸಲು ನಿರ್ಧರಿಸಿರುವ ಬಿಜೆಪಿ, ಸೆಪ್ಟೆಂಬರ್‌ ಮೊದಲ ವಾರದಿಂದ ಅಕ್ಟೋಬರ್‌ ಎರಡನೇ ವಾರದವರೆಗೆ ರಾಜ್ಯದ ವಿವಿಧೆಡೆ 7 ಬೃಹತ್‌ ‘ಜನೋತ್ಸವ’, 100 ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಂದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಉಪಸ್ಥಿತಿಯಲ್ಲಿ ಗುರುವಾರ ಇಡೀ ದಿನ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ದೊಡ್ಡಬಳ್ಳಾಪುರದಲ್ಲಿ ಮೊದಲ ಜನೋತ್ಸವ ನಡೆಯಲಿದೆ. ಉಳಿದ ಜನೋತ್ಸವ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕಲ್ಯಾಣ ಕರ್ನಾಟಕದಲ್ಲಿ ನಡೆಯಲಿದ್ದು,ದಿನಾಂಕ ಇನ್ನಷ್ಟೇ ನಿಗದಿ ಮಾಡಬೇಕಾಗಿದೆ. ಪ್ರತಿಯೊಂದು ಜನೋತ್ಸವದಲ್ಲಿ ಕನಿಷ್ಠ 5 ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್‌ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಅಲ್ಲದೇ, ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸೋತಿರುವ 100 ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಎರಡು ತಂಡಗಳಲ್ಲಿ ತಲಾ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಇವುಗಳ ದಿನಾಂಕಗಳನ್ನು ಸದ್ಯವೇ ನಿರ್ಧರಿಸಲಾಗುವುದು ಎಂದರು.

ಕರ್ನಾಟಕದ ಪ್ರತಿಯೊಂದು ಬೂತ್‌ ಅನ್ನು ಕನಿಷ್ಠ ಶೇ 50ಕ್ಕೂ ಹೆಚ್ಚು ಮತ ಪಡೆಯುವ ಬೂತ್‌ ಆಗಿ ಪರಿವರ್ತಿಸಬೇಕು. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ತಿಂಗಳಿಗೆ 15 ದಿನ ಪ್ರವಾಸ ಮಾಡುವಂತೆ ಅರುಣ್‌ ಸಿಂಗ್ ಸೂಚಿಸಿದ್ದಾರೆ. ‘ಸರ್ಕಾರ ಮತ್ತು ಪಕ್ಷದ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡುವುದು ಶಿಸ್ತಿನ ಕಾರ್ಯಕರ್ತರ ಲಕ್ಷಣ ಅಲ್ಲ. ಅಶಿಸ್ತನ್ನು ಪಕ್ಷ ಒಪ್ಪುವುದೂ ಇಲ್ಲ. ಪದೇ ಪದೇ ಈ ರೀತಿ ಮಾತನಾಡುವುದನ್ನೂ ಸಹಿಸುವುದಿಲ್ಲ. ಆದ್ದರಿಂದ ಎಲ್ಲರೂ ಅಭಿವೃದ್ಧಿಪರ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂಬುದಾಗಿ ಸಲಹೆ ನೀಡಿದ್ದಾರೆ’ ಎಂದು ಮಹೇಶ್‌ ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಸಾವರ್ಕರ್‌ ಅವರನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಹೇಳಿದರು.

ಬಿಎಸ್‌ವೈ ಭೇಟಿ ಮಾಡಿದ ಅರುಣ್‌ಸಿಂಗ್‌: ಅರುಣ್‌ ಸಿಂಗ್‌ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಿರುವುದರಿಂದ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಪ್ರಯೋಜನವಾಗಲಿದೆ’ ಎಂದರು.

‘ಈ ನೇಮಕ ಪಕ್ಷದ ಕಾರ್ಯಕರ್ತರಲ್ಲಿ ಹರ್ಷ ತಂದಿದೆ. ಅವರ ಸುದೀರ್ಘ ರಾಜಕೀಯ ಅನುಭವವು ಪಕ್ಷಕ್ಕೆ ಸಿಗಲಿದೆ.ನಾಲ್ಕು ಬಾರಿ ಮುಖ್ಯಮಂತ್ರಿ, ಮೂರು ಬಾರಿ ವಿರೋಧಪಕ್ಷದ ನಾಯಕ, 8 ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದಾ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಲೇ ಬಂದಿದ್ದಾರೆ. ಅವರಿಗೆ ಪಕ್ಷದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ’ ಎಂದು ಅರುಣ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.