ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕು ಮಾಡಲಾಗುತ್ತಿದೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿ, ಬಳಿಕ ಕೆಲ ಸಮಯ ಕಲಾಪದಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಸದಸ್ಯರು, ಕಲಾಪ ಮುಂದೂಡಿಕೆ ಆದಾಗ ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ಮನವಿ ಪತ್ರ ಅರ್ಪಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಗ್ಯಾರಂಟಿ ಅನುಷ್ಠಾನ ಮಾಡುವುದಕ್ಕಾಗಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಿರುವುದು ಮತ್ತು ಅವರ ಸಂಬಳಕ್ಕಾಗಿ ಸರ್ಕಾರದ ಬೊಕ್ಕದ ಹಣ ಬಳಸುತ್ತಿರುವುದು ಅಸಾಂವಿಧಾನಿಕ ನಡೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ’ ಎಂದರು.
ರಾಜ್ಯದ ಜನರ ತೆರಿಗೆ ಹಣದ ದುರುಪಯೋಗ ಆಗಿದೆ ಎಂದು ರಾಜ್ಯಪಾಲರಿಗೆ ಮನದಟ್ಟು ಮಾಡಲಾಗಿದೆ ಎಂದರು. ಈ ಸರ್ಕಾರಕ್ಕೆ ತಿಳಿ ಹೇಳುವ ಕೆಲಸ ಮಾಡುವಂತೆ ಹಾಗೂ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದಾಗಿ ತಿಳಿಸಿದರು.
‘ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಲೆ ಮತ್ತು ಕಾಲೇಜುಗಳ ಉಸ್ತುವಾರಿ ಸಮಿತಿಗಳಿಗೆ ಶಿಕಾರಿಪುರ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಕೊಟ್ಟ ಹೆಸರನ್ನು ಪರಿಗಣಿಸಲು ಸೂಚಿಸಿದ್ದಾರೆ. ಇಂಥ ಕೆಲಸ ಬೇರೆ ಕಡೆಯೂ ನಡೆಯುತ್ತಿದೆ. ಈ ಸಂಬಂಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲಿದ್ದೇನೆ. ಸಚಿವರಿಂದಲೂ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ’ ಎಂದು ದೂರಿದರು.
‘ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರ ಮಕ್ಕಳನ್ನು ಗ್ಯಾರಂಟಿ ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಗ್ಯಾರಂಟಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರು ಇಲ್ಲವೇ? ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕೇ’ ಎಂದು ವಿಜಯೇಂದ್ರ ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ವಿಧಾನ ಪರಿಷತ್ತಿನ ನಾಯಕ ಬೋಜೆಗೌಡ ಮತ್ತು ಬಿಜೆಪಿ-ಜೆಡಿಎಸ್ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.