ADVERTISEMENT

ಬಿಜೆಪಿ ನಾಯಕರು ‘ಮೂರ್ಖರು’: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:20 IST
Last Updated 9 ಅಕ್ಟೋಬರ್ 2024, 15:20 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿತ್ತಿರುವ ಬಿಜೆಪಿ ನಾಯಕರು ‘ಮೂರ್ಖರು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು.

‘ದಸರಾ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಮೂರ್ಖತನ. ಡೆಡ್‌ಲೈನ್ ನಿಗದಿ ಮಾಡಲು ಅವರು ಯಾರು? ಹೊಲಸು ರಾಜಕಾರಣ ಮಾಡುವುದೇ ಬಿಜೆಪಿ ಚಾಳಿ. ಅದೇ ಚಾಳಿ ವಿಜಯೇಂದ್ರನಿಗೂ ಬಂದಿದೆ’ ಎಂದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರನಿಗೆ ಬೆಳಗಾವಿಯಲ್ಲಿ, ವಿಜಯಪುರದಲ್ಲಿ, ಶಿವಮೊಗ್ಗದಲ್ಲಿ ಅವರ ಪಕ್ಷದವರೇ ಗುದ್ದುತ್ತಿದ್ದಾರೆ. ಮೊದಲು ತನ್ನ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ನೋಡಲಿ. ಆದಷ್ಟು ಬೇಗ ವಿಜಯೇಂದ್ರ ಮನೆಗೆ ಹೋಗುತ್ತಾನೆ ಎಂಬ ಚಿಂತೆ ನನಗೆ ಮೂಡಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ವಿಜಯೇಂದ್ರ ಭೇಟಿ ಮಾಡಿದ್ದು ನಾಟಕ, ಪ್ರಚಾರದ ತಂತ್ರ. ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರ ಬಗ್ಗೆ ನಿರ್ಧರಿಸಲು ಅವರಿಗೆ ಸಾಕಷ್ಟು ಅವಕಾಶವಿತ್ತು. ಈಗ ನಾಟಕ ಮಾಡುತ್ತಿದ್ದಾರೆ’ ಎಂದು ದೂರಿದರು.

ಸತೀಶ ಜಾರಕಿಹೊಳಿ ಅವರು ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಜಿ. ಪರಮೇಶ್ವರ, ಮಹದೇವಪ್ಪ ಸೇರಿದಂತೆ ಹಲವರನ್ನು ಭೇಟಿ ಮಾಡುತ್ತಿರುವುದು ತಪ್ಪಲ್ಲ, ಅದು ಪಕ್ಷದ ಆಂತರಿಕ ವಿಚಾರ. ಹೈಕಮಾಂಡ್‌ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.