ಬೆಂಗಳೂರು: ನಾಯಕತ್ವ ಬದಲಾವಣೆ, ಸರ್ಕಾರದ ಕಾರ್ಯವೈಖರಿ ಬಗ್ಗೆ ಶಾಸಕರ ಅಸಮಾಧಾನ ಆಲಿಸಲು ಬೆಂಗಳೂರಿಗೆ ಬುಧವಾರ ಬಂದಿರುವ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಎದುರು ದೂರು–ಪ್ರತಿದೂರು ಸಲ್ಲಿಸಿ, ತಮಗಿರುವ ಆಕ್ರೋಶ ಹೊರಹಾಕಲು ಆ ಪಕ್ಷದ ಇಬ್ಬಣಗಳ ಶಾಸಕರು ಸಜ್ಜಾಗಿದ್ದಾರೆ. ಇದರಿಂದಾಗಿ ಅಹವಾಲುಗಳ ಸುರಿಮಳೆಯನ್ನೇ ಎದುರಿಸುವ ಸವಾಲು ಉಸ್ತುವಾರಿಗೆ ಎದುರಾಗಿದೆ.
ಯಡಿಯೂರಪ್ಪ ಪರ ಮತ್ತು ವಿರೋಧಿ ಬಣಗಳು ಈಗಾಗಲೇ ತಾವು ಹೇಳಬೇಕಾಗಿರುವ ಅಂಶಗಳ ದೂರು– ಪ್ರತಿ ದೂರುಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ಅದನ್ನು ಗುರುವಾರ(ಜೂ.17) ಅರುಣ್‌ಸಿಂಗ್‌ಗೆ ಒಪ್ಪಿಸಲಿದ್ದಾರೆ. ಎಲ್ಲ ಶಾಸಕರ ಅಹವಾಲುಗಳನ್ನು ಕೇಳುವುದಾಗಿಯೂ ಸಿಂಗ್ ಸ್ಪಷ್ಟಪಡಿಸಿದ್ದಾರೆ.
‘ನಾಯಕತ್ವ ಬದಲಾವಣೆಗಾಗಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದು ನಿಜ’ ಎಂದು ಸಚಿವ ಈಶ್ವರಪ್ಪ ಹೇಳಿರುವುದು ಚರ್ಚೆಗೆ ಒಳಗಾದ ಬೆನ್ನಲ್ಲೇ, ‘ನಾಯಕತ್ವದ ಬಗ್ಗೆ ಚರ್ಚೆಗೆ ಇಲ್ಲಿಗೆ ಬಂದಿಲ್ಲ’ ಎಂದೂ ಅರುಣ್‌ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಗುರುವಾರದ ಸಭೆಯಲ್ಲಿ ಇವೆಲ್ಲವೂ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಜರಿದ್ದ ಕಾರಣ, ಯಾವುದೇ ಸಚಿವರು ಮುಕ್ತ
ವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ತಾವು ಹೇಳಬೇಕಾಗಿರುವ ಅಂಶ
ಗಳನ್ನು ಹೇಳಿದಅರುಣ್‌ಸಿಂಗ್, ಬೇಗನೆ ಸಭೆ ಮುಗಿಸಿದರು ಎಂದು ಮೂಲಗಳು ಹೇಳಿವೆ.
ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ ಮುಂತಾದವರು ತಮ್ಮ ಇಲಾಖೆಯ ಸಾಧನೆಗಳ
ಬಗ್ಗೆ ಚುಟುಕಾಗಿ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಮುಖ್ಯಮಂತ್ರಿ ಪರ ಮತ್ತು ವಿರೋಧಿ ಬಣಗಳು ಗೋಪ್ಯವಾಗಿ ಸಭೆಗಳನ್ನು ನಡೆಸಿದ್ದು, ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಏನೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅನ್ಯ ಪಕ್ಷದಿಂದ ಬಿಜೆಪಿಗೆ ವಲಸೆ ಬಂದು ಸಚಿವರಾದವರು ಕೃಷಿ ಸಚಿವ ಬಿ.ಸಿ.ಪಾಟೀಲ ಮನೆಯಲ್ಲಿ ಬುಧವಾರ ಸಭೆ ಸೇರಿ ತಮ್ಮ ಹಿತ ಕಾಯಲು ಏನು ಯಾವೆಲ್ಲ ವಿಷಯವನ್ನು ಮುಂದಿಡಬೇಕು ಎಂಬ ಚರ್ಚೆಯನ್ನೂ ಮತ್ತೊಂದೆಡೆ ನಡೆಸಿದರು. ಈ ಸಭೆಯಲ್ಲಿ ಡಾ.ಕೆ.ಸುಧಾಕರ್, ಆನಂದಸಿಂಗ್, ಕೆ.ಗೋಪಾಲಯ್ಯ, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್ ಮುಂತಾದವರು ಇದ್ದರು.
ಶಾಸಕರ ಜತೆ ಚರ್ಚಿಸುವೆ: ಸಚಿವರ ಸಭೆಯ ಬಳಿಕ ಮಾತನಾಡಿದ ಅರುಣ್‌ಸಿಂಗ್ ಅವರು, ’ನನ್ನನ್ನು ಭೇಟಿ ಮಾಡಲು ಬಯಸುವ ಎಲ್ಲ ಶಾಸಕರನ್ನೂ ಭೇಟಿ ಮಾಡುತ್ತೇನೆ. ಅವರ ದೂರು–ದುಮ್ಮಾನಗಳನ್ನು ಕೇಳುತ್ತೇನೆ. ಅವರ ಕ್ಷೇತ್ರಗಳಲ್ಲಿ ಜನಪರವಾದ ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ, ಮಾಹಿತಿ ನೀಡಿ ಎಂದು ಕೇಳುತ್ತೇನೆ‘ ಎಂದರು.
‘ಶಾಸಕರು ಹೇಳಬೇಕಾಗಿರುವುದನ್ನೆಲ್ಲ ನನ್ನ ಬಳಿ ಹೇಳಿಕೊಳ್ಳಬಹುದು. ಆದರೆ, ಮಾಧ್ಯಮಗಳ ಮುಂದೆ ಮಾತನಾಡಿದರೆ, ಅದರಿಂದ ಪಕ್ಷಕ್ಕೆ ನಷ್ಟ ಆಗುತ್ತದೆ ಎಂಬುದನ್ನು ಶಾಸಕರು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಮಾತಿನಿಂದ ಪಕ್ಷಕ್ಕೆ ಲಾಭ ಆಗುತ್ತದೆಯೋ ನಷ್ಟ ಆಗುತ್ತದೆಯೋ ಎಂಬುದನ್ನು ಯೋಚಿಸಬೇಕು‘ ಎಂದು ಅವರು ಸೂಚ್ಯವಾಗಿ ಹೇಳಿದರು.
ಸಚಿವರಿಗೆ ಸಿಂಗ್ ಸೂಚನೆ:
* ಪ್ರತಿ ಗುರುವಾರ ಶಾಸಕರು ಮತ್ತು ಕಾರ್ಯಕರ್ತರಿಗೆ ಮುಕ್ತ ಭೇಟಿಗೆ ಸಚಿವರು ಅವಕಾಶ ನೀಡಬೇಕು.
* ಸಚಿವರು ಎಲ್ಲ ಜಿಲ್ಲೆಗಳಲ್ಲಿರುವ ಪಕ್ಷದ ನಾಯಕರ ಜತೆ ಸಂಪರ್ಕ ಇಟ್ಟುಕೊಂಡು ಮಾತುಕತೆ ನಡೆಸಬೇಕು.
* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಈಗ ಪ್ರಚಾರದ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ.* ಯಾವುದೇ ಸಚಿವರಾಗಲಿ, ನಾಯಕರಾಗಲಿ ಪಕ್ಷದ ವಿರುದ್ಧ ಮಾತನಾಡಬಾರದು. ಇದರಿಂದ ಪಕ್ಷದ ಹಿತಕ್ಕೆ ಧಕ್ಕೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.