ADVERTISEMENT

ಇನ್ನು ಸೀಟಿನಿಂದ ಕೆಳಗಿಳಿಸುವ ಹುಚ್ಚು ಸಾಹಸ ಮಾಡಲಾರರು : ಬಸನಗೌಡ ಪಾಟೀಲ ಯತ್ನಾಳ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 13:09 IST
Last Updated 10 ಡಿಸೆಂಬರ್ 2019, 13:09 IST
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್   

ಶಿರಸಿ: ‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನನಾಯಕ ಎನ್ನುವುದು ಮೇಲಿನವರಿಗೂ ಗೊತ್ತಾಗಿದೆ. ಸ್ಥಳೀಯ ನಾಯಕತ್ವಕ್ಕೆ ಗೌರವ ಕೊಡಬೇಕೆನ್ನುವ ಸಂಗತಿಯು ಮಹಾರಾಷ್ಟ್ರ, ಹರಿಯಾಣ ಚುನಾವಣೆಯ ಅನುಭವದ ಅನಂತರ ಮೇಲೆ ಕುಳಿತವರಲ್ಲಿ ಅರಿವು ಮೂಡಿಸಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಂಗಳವಾರ ಇಲ್ಲಿ ಹೇಳಿದರು.

ಕೇಂದ್ರ ಪ್ರಮುಖರ ಹೆಸರು ಉಲ್ಲೇಖಿಸದೇ ಮಾತನಾಡಿದ ಅವರು, ‘ಉಪಚುನಾವಣೆ ಫಲಿತಾಂಶ ನೋಡಿದ ಮೇಲೆ ಇನ್ನು ದಿಢೀರ್ ಆಗಿ ಯಡಿಯೂರಪ್ಪ ಅವರನ್ನು ಸೀಟಿನಿಂದ ಕೆಳಗಿಳಿಸುವ, ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡುವ ಹುಚ್ಚು ಸಾಹಸವನ್ನು ಯಾರೂ ಮಾಡುವುದಿಲ್ಲ’ ಎಂದರು.

‘ಉಪಚುನಾವಣೆಯಲ್ಲಿ ನಾನು ಸ್ಟಾರ್ ಪ್ರಚಾರನಾಗಿರಲಿಲ್ಲ. ಕಾರಿಗೆ ಸ್ಟಾರ್ ಪ್ರಚಾರಕನೆಂದು ಬೋರ್ಡ್ ಹಾಕಿಕೊಂಡು ಹೋದರೆ, ಹತ್ತು ಜನರೂ ಬರುವುದಿಲ್ಲ. ಜನಾನುರಾಗಿ ಇದ್ದವರಿಗೆ ಅವಕಾಶ ಕೊಡಬೇಕು. ರೂಮಿನಲ್ಲಿ ಕುಳಿತು ಸಭೆ ಮಾಡುವವರಿಗೆ ನಾಯಕತ್ವ ಕೊಟ್ಟರೆ, ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ’ ಎಂದ ಅವರು, ‘ರಾಜ್ಯ ಘಟಕದ ಅಧ್ಯಕ್ಷರು ಬಹಳ ಮುಗ್ಧ ಸ್ವಭಾವದವರು. ಕೆಲವೊಮ್ಮೆ ಅವರ ಒಳ್ಳೆತನ ದುರುಪಯೋಗವಾಗುತ್ತದೆ’ ಎಂದರು.

ADVERTISEMENT

‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆಶ್ಚರ್ಯಕರ ರೀತಿಯಲ್ಲಿ ಸಚಿವ ಸ್ಥಾನ ಬಂದರೂ ಬರಬಹುದೆಂದು ನಿರೀಕ್ಷಿಸಿದ್ದೇನೆ. ಸಚಿವ ಸ್ಥಾನಕ್ಕಾಗಿ ಬಯೊಡೆಟಾ ಹಿಡಿದು ಮನೆ–ಮನೆ ಅಡ್ಡಾಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.