ADVERTISEMENT

‘ಕೇಸರಿ’ ಶಿಕಾರಿಗೆ ಕೈ ತಯಾರಿ?

ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 18:47 IST
Last Updated 9 ಆಗಸ್ಟ್ 2018, 18:47 IST
   

ಬೆಂಗಳೂರು/ಗುಳೇದಗುಡ್ಡ: ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಮುಂದಾಗಲಿದೆ ಎಂಬ ಸುದ್ದಿಯ ಮಧ್ಯೆಯೇ, ಈ ಕೇಸರಿ ಪಾಳಯದ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ತಯಾರಿ ನಡೆಸಿದೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಈ ವದಂತಿಗೆ ಪುಷ್ಟಿ ನೀಡುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ. ಆದರೆ, ಬಿಜೆಪಿಯತ್ತ ವಾಲುತ್ತಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ‘ಕೈ’ ಧುರೀಣರು ಈ ರೀತಿ ಮಾತನಾಡುತ್ತಿದ್ದಾರೆ. ಅದೆಲ್ಲ ಸುತರಾಂ ಸುಳ್ಳು ಎಂದು ಬಿಜೆಪಿ ಮೂಲಗಳು ಪ್ರತಿಪಾದಿಸಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ನಮ್ಮ ಪಕ್ಷಕ್ಕೆ ಬರಲಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಕಮಲ ‍ಪಕ್ಷದ ಮುಖಂಡರು ಹೇಳಿದ್ದರು.

ADVERTISEMENT

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ಗುರುವಾರ ಮಾತನಾಡಿದ ಸಿದ್ದರಾಮಯ್ಯ, ಹಿಂಬಾಗಿಲಿನ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

‘ಯಡಿಯೂರಪ್ಪ ಈ ಹಿಂದೆ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿದ್ದು, ಕೇವಲ ಮೂರು ದಿನ ಮುಖ್ಯಮಂತ್ರಿಯಾಗಿದ್ದರು. ಈಗಾಗಲೇ ಒಂದು ಬಾರಿ ಮುಖಭಂಗ ಅನುಭವಿಸಿದ್ದಾರೆ. ನಮ್ಮ ಪಕ್ಷದ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರೇ ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಯಾರು ಎಂದು ಈಗಲೇ ಹೇಳುವುದಿಲ್ಲ’ ಎಂದರು.

‘ಬಿಜೆಪಿಯ ಕೆಲವು ಶಾಸಕರು ನಮ್ಮ ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ ಸೇರಲು ಬಯಸಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೆಂಗಳೂರಿನಲ್ಲಿ ಹೇಳಿದರು.

‘ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೆಲವು ವಿಚಾರಗಳನ್ನು ಗೌಪ್ಯವಾಗಿ ಇಡಬೇಕಾಗುತ್ತದೆ’ ಎಂದು ಅವರೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.