ADVERTISEMENT

ಉಸ್ತುವಾರಿ ಸಚಿವರ ವಿರುದ್ಧ ಮುಖ್ಯಮಂತ್ರಿಗೆ ಬಿಜೆಪಿ ಶಾಸಕರ ದೂರು

ಎರಡು ದಿನಗಳ ಶಾಸಕರ ಸಭೆಗೆ ಚಾಲನೆ ನೀಡಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 10:08 IST
Last Updated 4 ಜನವರಿ 2021, 10:08 IST
ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ    

ಬೆಂಗಳೂರು:ತಮ್ಮ ಕ್ಷೇತ್ರಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ, ಉಸ್ತುವಾರಿ ಸಚಿವರ ಕಾರ್ಯವೈಖರಿಯ ಬಗ್ಗೆ ದೂರು, ಅಧಿಕಾರಿಗಳ ವರ್ಗಾವಣೆ ಮತ್ತಿತರ ವಿಷಯಗಳ ಕುರಿತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಮಾತನಾಡಿ ತಮ್ಮ ಬೇಗುದಿ ತೋಡಿಕೊಂಡರು.

ಪಕ್ಷದ ಶಾಸಕರ ಬೇಕು– ಬೇಡಗಳನ್ನು ಆಲಿಸುವುದರ ಜತೆಗೆ, ಬಜೆಟ್‌ನಲ್ಲಿ ಅವರ ಬೇಡಿಕೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಯಡಿಯೂರಪ್ಪ ಅವರು ಎರಡು ದಿನಗಳ ಸಭೆಗೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು. ಇಂದು ರಾತ್ರಿ 8 ರವರೆಗೆ ಸಭೆ ನಡೆಯಲಿದ್ದು, ನಾಳೆಯೂ ಸಭೆ ಮುಂದುವರಿಯಲಿದೆ.

ಮುಖ್ಯಮಂತ್ರಿಯವರು ತಮ್ಮ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ,ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ ಎಂಬ ಬಗ್ಗೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕಳೆದ ವರ್ಷವೂ ಶಾಸಕರ ಸಭೆ ನಡೆಸಿದ್ದು, ಈ ವರ್ಷ ಇದು ಮೊದಲನೇ ಸಭೆಯಾಗಿದೆ. ಪ್ರದೇಶವಾರು ಸಭೆಯನ್ನು ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಸಭೆ ಮುಗಿದಿದ್ದು, ಮಧ್ಯಾಹ್ನ ಮುಂಬೈ ಮತ್ತು ಮಧ್ಯ ಕರ್ನಾಟಕ, ರಾತ್ರಿ ಕರಾವಳಿ ಕರ್ನಾಟಕ ಭಾಗದ ಶಾಸಕರ ಸಭೆ ನಡೆಯಲಿದೆ.

ADVERTISEMENT

ಉಸ್ತುವಾರಿ ಮಂತ್ರಿಗಳು ಅಧಿಕಾರಿಗಳ ವರ್ಗಾವಣೆ ವಿಚಾರ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಪ್ರತಿ ಪಕ್ಷಗಳ ಶಾಸಕರ ಕೆಲಸ ಬೇಗನೆ ಆಗುತ್ತಿದೆ. ಕೆಡಿಪಿ ಸಭೆಗಳಿಗೆ ಕರೆಯುವುದಿಲ್ಲ ಎಂಬುದಾಗಿ ಕೆಲವು ಶಾಸಕರು ದೂರು ನೀಡಿದರು.

‘ಈ ಬಗ್ಗೆ ಎಲ್ಲ ಉಸ್ತುವಾರಿ ಸಚಿವರ ಜತೆ ಮಾತನಾಡಿ, ವರ್ಗಾವಣೆ ಇರಲಿ, ಅಬಿವೃದ್ಧಿ ಕಾರ್ಯ ಇರಲಿ ಎಲ್ಲ ಶಾಸಕರ ಅಭಿಪ್ರಾಯ ಪಡೆದುಕೊಂಡೇ ಮುಂದುವರಿಯಲು ಸೂಚಿಸುತ್ತೇನೆ. ಒಂದು ವೇಳೆ ನಿಮ್ಮ ಮಾತು ಕೇಳದೇ ಇದ್ದಲ್ಲಿ, ನನ್ನ ಬಳಿ ಎಲ್ಲರೂ ಒಟ್ಟಾಗಿ ಬನ್ನಿ, ನಿಮ್ಮ ಕೆಲಸ ಮಾಡಿಸಿ ಕೊಡುವ ಜವಾಬ್ದಾರಿ ನನ್ನದು’ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಕಳೆದ ಒಂದು ವರ್ಷದಿಂದ ನಿರೀಕ್ಷಣಾ ಮಂದಿರಗಳೂ ಸೇರಿದಂತೆ ವಿವಿಧ ಹೆಸರುಗಳಲ್ಲಿ ಭವನಗಳ ನಿರ್ಮಾಣಕ್ಕೆ ತಡೆ ನೀಡಲಾಗಿದೆ. ಇವುಗಳನ್ನು ಪುನರಾರಂಭಿಸಬೇಕು ಎಂಬ ಒತ್ತಾಯ ಶಾಸಕರಿಂದ ಕೇಳಿ ಬಂದಿದೆ. ಈ ಹಿಂದೆ ನಿರ್ಮಾಣವಾಗಿರುವ ಭವನಗಳು ಅನುತ್ಪಾದಕ ಆಗಿರುವುದರಿಂದ, ಪುನಃ ಅಂತಹ ಭವನಗಳ ನಿರ್ಮಾಣ ಮಾಡುವುದರಿಂದ ಬೊಕ್ಕಸಕ್ಕೂ ಹೊರೆ ಆಗುತ್ತದೆ. ಅದರ ಬದಲಿಗೆ ರಸ್ತೆ, ಕುಡಿಯುವ ನೀರು, ಸೇತುವೆಗಳಂತಹ ಮೂಲ ಸೌಕರ್ಯಗಳಿಗೆ ಒತ್ತು ನೀಡುವ ಬಗ್ಗೆ ಮನವೊಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಆರ್ಥಿಕ ಸಂಕಷ್ಟದ ಮಧ್ಯೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕಾದ ಅಗತ್ಯವನ್ನು ಮನವರಿಕೆ ಮಾಡುವ ಪ್ರಯತ್ನ ನಡೆಸಿದರು. ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡುವಂತೆಯೂ ಅವರು ಸೂಚನೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೂ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.