ADVERTISEMENT

ಸಜ್ಜನ್‌ ಜಿಂದಾಲ್ ಜತೆ ವೇದಿಕೆ ಹಂಚಿಕೊಂಡ ಬಿಜೆಪಿ ಶಾಸಕರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 18:47 IST
Last Updated 8 ಜೂನ್ 2019, 18:47 IST

ಹೊಸಪೇಟೆ:ರಾಜ್ಯ ಸರ್ಕಾರವು ಜಿಂದಾಲ್‌ಗೆ ಭೂ ಪರಭಾರೆ ಮಾಡುತ್ತಿರುವುದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಆದರೆ, ಅದೇ ಪಕ್ಷದ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರ್ ರೆಡ್ಡಿ ಅವರು ಶನಿವಾರ ಹೊಸಪೇಟೆಯಲ್ಲಿ ನಡೆದ ವಾಣಿಜ್ಯ ಮತ್ತು ಕೈಗಾರಿಕೆಗಳ ರಾಜ್ಯ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸಜ್ಜನ್ ಜಿಂದಾಲ್ ಜತೆ ವೇದಿಕೆ ಹಂಚಿಕೊಂಡರು.

ಸಜ್ಜನ್‌ ಜಿಂದಾಲ್ ಮತ್ತು ರಾಮುಲು ಅಕ್ಕಪಕ್ಕ ಕುಳಿತಿದ್ದರು. ಕಾರ್ಯಕ್ರಮದುದ್ದಕ್ಕೂ ಪರಸ್ಪರ ಗುಸುಗುಸು ಮಾತಾಡುತ್ತಲೇ ಇದ್ದರು.

‘ಕೈಗಾರಿಕೆಗಳು ಬೆಳೆಯಬೇಕು. ಯಾವುದೇ ಪಕ್ಷದ ಸರ್ಕಾರ ಬರಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಚುನಾವಣೆ ಬಂದಾಗಲಷ್ಟೇ ರಾಜಕಾರಣ. ಒಳ್ಳೆಯ ಕೆಲಸಕ್ಕೆ ಎಲ್ಲ ಪಕ್ಷದವರು ಬೆಂಬಲ ಕೊಡಬೇಕು' ಎಂದು ಬಿ.ಶ್ರೀರಾಮುಲು ಹೇಳಿದರು.

ADVERTISEMENT

ಸೋಮಶೇಖರ್ ರೆಡ್ಡಿ ಮಾತನಾಡಿ, 'ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಉಚಿತವಾಗಿ ಭೂಮಿ ಕೊಟ್ಟರೆ ತಪ್ಪಿಲ್ಲ. ಸರ್ಕಾರದಿಂದ ಉದ್ಯೋಗ ಕೊಡಲು ಆಗುತ್ತಿಲ್ಲ. ಕೈಗಾರಿಕೆಗಳು ಆ ಕೆಲಸ ಮಾಡುತ್ತಿವೆ. ಆದಕಾರಣ ಕೈಗಾರಿಕೆಗಳಿಗೆ ಎಲ್ಲ ರೀತಿಯ ಬೆಂಬಲ ಸಿಗಬೇಕು' ಎಂದು ಹೇಳಿದರು.

ಭೂ ಪರಭಾರೆ ಕುರಿತು ಮಾತನಾಡಲಾರೆ
'ನಾವು ಯಾವುದೇ ಅಕ್ರಮ ಎಸಗುತ್ತಿಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಕಂಪನಿ ನಡೆಸುತ್ತಿದ್ದೇವೆ. ಭೂ ಪರಭಾರೆ ವಿಷಯ ರಾಜಕೀಯಗೊಳ್ಳುತ್ತಿದ್ದರೆ ಅದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ರಾಜಕೀಯದಲ್ಲಿ ಅದೆಲ್ಲ ಸಾಮಾನ್ಯ' ಎಂದು ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು.

ತೋರಣಗಲ್ ನ ಜಿಂದಾಲ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕಿದೆ. ಅದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಯಾರೋ ಒಬ್ಬರು ವಿರೋಧಿಸಿದರೆ ಏನಾಗಲಿದೆ?’ ಎಂದು ಅಪರೋಕ್ಷವಾಗಿ ಶಾಸಕ ಎಚ್.ಕೆ. ಪಾಟೀಲ ಅವರನ್ನು ಕುಟುಕಿದರು.

‘ಎಂ.ಎಂ.ಎಲ್.ಗೆ ಪಾವತಿಸಬೇಕಾದ 12,00 ಕೋಟಿ ವಿಚಾರ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನಾನೇನೂ ಮಾತನಾಡಲಾರೆ. ಮಾತಾಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.