ADVERTISEMENT

ಬಿಜೆಪಿ ಶಾಸಕರ ಬಲ ಪರೀಕ್ಷೆ: ಅಭ್ಯರ್ಥಿ ಆಯ್ಕೆಗೆ ಮತದಾನ

18,000 ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:51 IST
Last Updated 31 ಮಾರ್ಚ್ 2023, 19:51 IST
   

ಬೆಂಗಳೂರು: ಯಾವುದೇ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷದ ಕಚೇರಿಯಲ್ಲೊ, ರೆಸಾರ್ಟ್‌ ಅಥವಾ ಹೊಟೇಲ್‌ನಲ್ಲಿ ಕುಳಿತು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವುದು ವಾಡಿಕೆ. ಆದರೆ, ಬಿಜೆಪಿ ದೇಶದಲ್ಲಿ ಇದೇ ಮೊದಲ ಬಾರಿಗೆ ತನ್ನ ಅಭ್ಯರ್ಥಿ
ಗಳ ಪಟ್ಟಿಯನ್ನು ಸಿದ್ಧಪಡಿಸಲು ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮೂಲಕ ಚುನಾವಣೆ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದೆ.

ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರ ಗಳಿಗೆ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ 18,000 ಜನರಿಂದ ಶುಕ್ರವಾರ ಮತ ಚಲಾವಣೆ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು.

‘ಅಭ್ಯರ್ಥಿಗಳ ಆಯ್ಕೆಯಲ್ಲೂ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಮತ್ತು ಪ್ರಜಾಸತ್ತಾತ್ಮಕ ವಿಧಾನ ಖಾತರಿ ಪಡಿಸುವ ಹೊಸ ವಿಧಾನ ಇದಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಇದೊಂದು ಪಾರದರ್ಶಕ ಪ್ರಕ್ರಿಯೆ. ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಈ ವಿಧಾನ ಅನುಸರಿಸಲಾಗಿದೆ. ಮುಂದೆ ಇತರ ರಾಜ್ಯಗಳಿಗೂ ಅನ್ವಯಿಸುತ್ತೇವೆ’ ಎಂದು ಬಿಜೆಪಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಚುನಾವಣಾ ವಿಧಾನ ಹೇಗಿತ್ತು?: ಪ್ರತಿ ಜಿಲ್ಲೆಗೂ ರಾಜ್ಯ ಮಟ್ಟದ ಮೂವರು ನಾಯಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡವು ಅಭಿಪ್ರಾಯ ಸಂಗ್ರಹದ (ಚುನಾವಣೆ) ಉಸ್ತುವಾರಿ ವಹಿಸಿತ್ತು. ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಇದ್ದರೂ, ಮತ ಪತ್ರದಲ್ಲಿ ಯಾರ ಹೆಸರೂ ನಮೂದಿಸಿರಲಿಲ್ಲ. ಖಾಲಿ ಇತ್ತು. ಕಾರ್ಯಕರ್ತರು, ಪದಾಧಿಕಾರಿಗಳಿಗೇ ತಮ್ಮ ಇಚ್ಛೆಯ ಹೆಸರುಗಳನ್ನು ನಮೂದಿಸಲು ಅವಕಾಶ ನೀಡಲಾಗಿತ್ತು. ಮೊದಲ ಆದ್ಯತೆ, ಎರಡನೇ ಆದ್ಯತೆ, ಮೂರನೇ ಆದ್ಯತೆಯಾಗಿ ಮೂರು ಹೆಸರುಗಳನ್ನು ಸೂಚಿಸಬಹುದಾಗಿತ್ತು ಎಂದು ಅವರು ಹೇಳಿದರು.

ಮತ ಹಾಕಿದವರು ಯಾರು?: ಪ್ರತಿ ಜಿಲ್ಲೆಯ ಶಕ್ತಿ ಕೇಂದ್ರದ ಪ್ರಮುಖರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಂಡಲ ಕೋರ್ ಸಮಿತಿ ಸದಸ್ಯರು, ಮಂಡಲ ಪದಾಧಿಕಾರಿಗಳು, ಮಂಡಲ ಮೋರ್ಚಾಗಳ ಅಧ್ಯಕ್ಷರು, ಮಂಡಲ
ದಲ್ಲಿರುವ ಜಿಲ್ಲೆ, ರಾಜ್ಯ, ಪ್ರಕೋಷ್ಠಗಳ ಸಂಚಾಲಕರು, ಮೋರ್ಚಾಗಳ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿ.ಪಂ, ತಾ.ಪಂ.ಗಳ ಹಾಲಿ ಮತ್ತು ಮಾಜಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಹಾಲಿ ಮತ್ತು ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಹಾಲಿ ಮತ್ತು ಮಾಜಿ ಸಂಸದರು ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಸುಮಾರು 300 ರಿಂದ 350 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಹಾಲಿ ಶಾಸಕರೇ ಇರಬೇಕೆ? ಹೊಸಬರನ್ನು ಆಯ್ಕೆ ಮಾಡಬೇಕೆ ಎಂಬುದು ಅಭಿಪ್ರಾಯ ಸಂಗ್ರಹದ ಮೂಲಕ ಸ್ಪಷ್ಟವಾಗುತ್ತದೆ. ಇವತ್ತಿನ ಚುನಾವಣೆಯ ಫಲಿತಾಂಶದ ಜತೆಗೆ
ಪಕ್ಷ ಈಗಾಗಲೇ ನಡೆಸಿರುವ ವಿಧಾನಸಭಾ ಕ್ಷೇತ್ರವಾರು ಸಮೀಕ್ಷೆಯ ಫಲಿತಾಂಶವನ್ನೂ ತಾಳೆ ಹಾಕಿ ಅಂತಿಮ ಪಟ್ಟಿಯನ್ನು ತಯಾರಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ ಅತ್ಯಧಿಕ ಮತ ಬಂದಿದ್ದರೆ, ಒಂದೇ ಹೆಸರು ಕಳಿಸಲಾಗುತ್ತದೆ. ಇಬ್ಬರು ಆಕಾಂಕ್ಷಿಗಳಿಗೆ ಮತಗಳು ಸಮಬಲವಾಗಿದ್ದರೆ, ಎರಡೂ ಹೆಸರುಗಳನ್ನು ಕಳುಹಿಸಲಾಗುತ್ತದೆ.

ನಗರದ ಹೊರ ವಲಯದ ರೆಸಾರ್ಟ್‌ವೊಂದರಲ್ಲಿ (ಏ.1 ಮತ್ತು 2) ಶನಿವಾರ ಮತ್ತು ಭಾನುವಾರ ನಡೆಯುವ ಜಿಲ್ಲಾ ಕೋರ್‌ ಕಮಿಟಿಗಳ ಸಭೆಯಲ್ಲಿ ಸಂಗ್ರಹಿತ ಮತವನ್ನು ವಿಶ್ಲೇಷಿಸಿ, ಪಟ್ಟಿಯನ್ನು ತಯಾರಿಸಲಾಗುತ್ತದೆ. ಏ. 4 ಮತ್ತು 5 ರಂದು ನಡೆಯುವ ರಾಜ್ಯ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಏ.7 ರಂದು ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಒಂದೇ ಪಟ್ಟಿಯಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರೂ ಪ್ರಕಟವಾಗಲಿದೆ ಎಂದೂ ಮೂಲಗಳು ಹೇಳಿವೆ.

ಕಾಂಗ್ರೆಸ್‌ಗೆ 39 ಕ್ಷೇತ್ರ ಕಗ್ಗಂಟು

ಬೆಂಗಳೂರು: ಎರಡನೇ ಹಂತದಲ್ಲಿ 60 ಕ್ಷೇತ್ರಗಳಿಗೆ ಒಂದೇ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗಾಗಿ ನೇಮಿಸಿರುವ ‘ಸ್ಕ್ರೀನಿಂಗ್‌ ಸಮಿತಿ’ ಯಶಸ್ವಿಯಾಗಿದೆ. 39 ಕ್ಷೇತ್ರಗಳಲ್ಲಿನ ಪೈಪೋಟಿಯಿಂದಾಗಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಮೊದಲ ಹಂತದಲ್ಲಿ 124 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಪ್ರಕಟಿಸಿತ್ತು. ಬಾಕಿ ಉಳಿದಿರುವ 100 ಕ್ಷೇತ್ರಗಳ ಪೈಕಿ ಪಾಂಡವಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ರೈತ ಸಂಘದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ.

99 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಸ್ಕ್ರೀನಿಂಗ್‌ ಕಮಿಟಿ ಅಧ್ಯಕ್ಷರಾದ ಮೋಹನ್‌ ಪ್ರಕಾಶ್ ನೇತೃತ್ವದ ಸಮಿತಿ ಎರಡು ಬಾರಿ ಸಭೆ ನಡೆಸಿದೆ. ಸೋಮವಾರ ನಡೆದ ಸಭೆಯಲ್ಲಿ 37 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಗುರುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸಭೆ ಬೆಳಗಿನ ಜಾವ 4 ಗಂಟೆಯವರೆಗೂ ನಡೆದಿದೆ.

ಒಟ್ಟು 60 ಕ್ಷೇತ್ರಗಳಿಗೆ ತಲಾ ಒಬ್ಬ ಆಕಾಂಕ್ಷಿಯ ಹೆಸರನ್ನು ಮಾತ್ರ ಶಿಫಾರಸು ಮಾಡಲು ಸಭೆಯಲ್ಲಿ ಸಹಮತ ಮೂಡಿದೆ. ಉಳಿದಂತೆ 30ಕ್ಕೂ ಹೆಚ್ಚು ಕ್ಷೇತ್ರಗಳಿಗೆ ತಲಾ ಇಬ್ಬರ ಹೆಸರು ಶಿಫಾರಸು ಮಾಡಲಾಗಿದೆ. ಐದರಿಂದ ಏಳು ಕ್ಷೇತ್ರಗಳಿಗೆ ನಾಲ್ಕರಿಂದ ಐದು ಮಂದಿಯ ಹೆಸರುಗಳನ್ನು ಶಿಫಾರಸು ಮಾಡುವ ತೀರ್ಮಾನವನ್ನು ಸಮಿತಿ ಕೈಗೊಂಡಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಹಮತ ಮೂಡಿಸಲು ಯತ್ನ: ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗೆ ಪೈಪೋಟಿ ನಡೆಸುತ್ತಿರುವ ಕ್ಷೇತ್ರಗಳಲ್ಲೂ ಸಹಮತ ಮೂಡಿಸುವ ಪ್ರಯತ್ನ ಕಾಂಗ್ರೆಸ್‌ ನಾಯಕರಿಂದ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಟಿಕೆಟ್‌ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿ, ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.