ADVERTISEMENT

ಸರ್ಕಾರ ಬಿದ್ದರೆ ಬಿಎಸ್‌ವೈ ಪ್ರಮಾಣ?

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 20:06 IST
Last Updated 15 ಜುಲೈ 2019, 20:06 IST
   

ಬೆಂಗಳೂರು: ‘ಮೈತ್ರಿ’ ಸರ್ಕಾರ ಬಿದ್ದ ಮಾರನೇ ದಿನವೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ರಾಜಕೀಯ ಅನಿಶ್ಚಿತತೆ ಆರಂಭವಾಗಿ ಹತ್ತು ದಿನಗಳು ಕಳೆದಿವೆ. ರಾಜ್ಯದ ಜನರೂ ಬೇಸತ್ತು ಹೋಗಿದ್ದಾರೆ. ಆಡಳಿತ ಯಂತ್ರವೂ ಸ್ಥಗಿತವಾಗಿದೆ. ರಾಜೀನಾಮೆ ನೀಡಿ ಬಂದಿರುವ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಯಡಿಯೂರಪ್ಪಬೇಗನೆ ಪ್ರಮಾಣ ವಚನ ಸ್ವೀಕರಿಸುವರು ಎಂದು ಮೂಲಗಳು ತಿಳಿಸಿವೆ.

ಆಷಾಢ ಮಾಸವಿದ್ದರೂ ಆ ಬಗ್ಗೆ ಬಿಜೆಪಿ ಹೆಚ್ಚಿಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ, ಇದೇ ತಿಂಗಳಲ್ಲಿ ಹಣಕಾಸು ಮಸೂದೆಗೆ ಅಂಗೀಕಾರವೂ ಸಿಗಬೇಕಾಗಿದೆ. ಇಲ್ಲವಾದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸಾಧ್ಯವಾಗದು. ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಒಂದು ದಿನ ತಡ ಮಾಡಿದರೂ ದೋಸ್ತಿಗಳು ಕಿತಾಪತಿ ಮಾಡಬಹುದು ಎಂಬ ಆತಂಕವೂ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ADVERTISEMENT

ರೆಸಾರ್ಟ್‌ಗೆ ಶಾಸಕರು: ವಿಧಾನಸಭೆ ಕಲಾಪ ಗುರುವಾರಕ್ಕೆ ಮುಂದೂಡಿಕೆ ಆದ ತಕ್ಷಣವೇ ಶಾಸಕರನ್ನು ರಾಜಾನುಕುಂಟೆಯಲ್ಲಿರುವ ರಮಡಾ ರೆಸಾರ್ಟ್‌ಗೆ ಕಳುಹಿಸಲಾಯಿತು. ಗುರುವಾರ ಬೆಳಿಗ್ಗೆವರೆಗೆ ಅಲ್ಲೇ ಉಳಿಯಲಿದ್ದಾರೆ.

ರೆಸಾರ್ಟ್‌ನಲ್ಲಿ ಇಲ್ಲ– ಸಲ್ಲದ್ದನ್ನು ಮಾಡಿ ಅದರ ಚಿತ್ರಗಳನ್ನು ತೆಗೆದು ಶೇರ್‌ ಮಾಡಿಮಾಧ್ಯಮಗಳಿಗೆ ಆಹಾರವಾಗಬೇಡಿ ಎಂಬ ಸೂಚನೆಯನ್ನೂ ನೀಡಲಾಗಿದೆ. ಒಂದು ವೇಳೆ ಮುಜುಗರ ಉಂಟು ಮಾಡುವಂತೆ ನಡೆದುಕೊಂಡು ಮಾಧ್ಯಮಗಳಲ್ಲಿ ಪ್ರಕಟವಾದರೆ, ಜನರ ಮುಂದೆ ತಲೆ ತಗ್ಗಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

‘ಶಾಸಕರನ್ನು ಎರಡು ದಿನ ‘ಬೇಲಿ’ಯೊಳಗೆ ಇಟ್ಟು ಕಾವಲು ಕಾಯಬೇಕು. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಯ ಯಾವುದೇ ಶಾಸಕರೂ ಕಾಂಗ್ರೆಸ್‌– ಜೆಡಿಎಸ್‌ ಕ್ಯಾಂಪ್‌ಗೆ ಜಿಗಿಯುವುದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಮಾರಸ್ವಾಮಿ– ಶಿವಕುಮಾರ್‌ ಜೋಡಿಯನ್ನು ನಂಬುವುದು ಕಷ್ಟ. ತಮ್ಮ ಸರ್ಕಾರ ಬೀಳುವ ಹತಾಶೆಯಲ್ಲಿ, ಯಾವುದೇ ಹಂತಕ್ಕೂ ಹೋಗಲು ಹಿಂಜರಿಯುವುದಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಚುನಾವಣೆಯೊ, ಸರ್ಕಾರವೊ

‘ಮೈತ್ರಿ’ ಸರ್ಕಾರ ಪತನವಾದ ಬಳಿಕ ಬಿಜೆಪಿ ಚುನಾವಣೆಗೆ ಹೋಗುತ್ತದೆಯೊ, ಸರ್ಕಾರ ರಚಿಸುತ್ತದೆಯೋ ಎಂಬ ಜಿಜ್ಞಾಸೆಯೂ ರಾಜಕೀಯ ವಲಯದಲ್ಲಿ ನಡೆದಿದೆ.

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಅಲ್ಲದೇ, ರಾಜ್ಯದಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು. ಹೀಗಾಗಿ ಮಧ್ಯಂತರ ಚುನಾವಣೆಗೆ ಹೋದರೆ ಪುನಃ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆ ಪ್ರಯತ್ನ ಏಕೆ ನಡೆಸಬಾರದು ಎಂಬ ಮಾತೂ ಕೇಳಿ ಬಂದಿದೆ.

ಕಾಂಗ್ರೆಸ್‌– ಜೆಡಿಎಸ್‌ನಿಂದ ಬಂದ ಶಾಸಕರು ಮಧ್ಯದಲ್ಲಿ ಕಿತಾಪತಿ ಮಾಡಿದರೆ, ಸರ್ಕಾರಕ್ಕೆ ಸಂಕಷ್ಟ ಒದಗಬಹುದು. ಅದರ ಬದಲು ಮೊದಲೇ ಚುನಾವಣೆಗೆ ಹೋದರೆ ಅಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬ ಚಿಂತನೆಯೂ ನಡೆದಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.