ADVERTISEMENT

ಬಿಜೆಪಿ ಆಟ ಮೈತ್ರಿಗೆ ‘ಪ್ರಾಣ’ ಸಂಕಟ; ಕುಸಿತದತ್ತ ಸಾಗುತ್ತಿದೆ ‘ವಿಶ್ವಾಸ’ದ ಯತ್ನ

ಸದನದಲ್ಲಿ ಶಾಂತಿಯುತ ಹೋರಾಟಕ್ಕೆ ಕಮಲ ಪಡೆ ಸಜ್ಜು

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST
   

ಬೆಂಗಳೂರು: ಸರ್ಕಾರವನ್ನು ಉಳಿಸುವ–ಬೀಳಿಸುವ ಹಾವುಏಣಿಯಾಟ ಗಳಿಗೆಗೊಂದು ತಿರುವು ಪಡೆಯುತ್ತಿದ್ದು, ಭಾನುವಾರ ಈ ಆಟದಲ್ಲಿ ಅತೃಪ್ತ ಶಾಸಕರು ಹಾಗೂ ಅವರ ಜತೆಗಿರುವ ಬಿಜೆಪಿ ತುಸು ಮೇಲುಗೈ ಸಾಧಿಸಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಮಿತ್ರಕೂಟದ ನಾಯಕರ ಪರದಾಟ ಮುಂದುವರಿದಿದೆ.

ಶನಿವಾರ ಇಡೀ ದಿನ ನಡೆದ ಮನವೊಲಿಕೆಯ ನಂತರ ಮನಸ್ಸು ಬದಲಿಸಿದ್ದ ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್‌, ರಾಜೀನಾಮೆ ವಾಪಸ್‌ ಪಡೆಯುವುದಾಗಿ ಪ್ರಕಟಿಸಿದ್ದರು. ಇದರಿಂದಾಗಿ ಮೈತ್ರಿ ಕೂಟದ ನಾಯಕರು ನಿಟ್ಟುಸಿರುಬಿಟ್ಟಿದ್ದರು. ಮೈತ್ರಿ ಸರ್ಕಾರಕ್ಕೆ ಸಿಕ್ಕ ‘ಪ್ರಾಣವಾಯು’ ಬಹುಕಾಲ ಉಳಿಯಲೇ ಇಲ್ಲ. ತಕ್ಷಣವೇ ಪ್ರತಿ ಕಾರ್ಯಾಚರಣೆ ನಡೆಸಿದ ಬಿಜೆಪಿ ನಾಯಕರು, ಮುಂಬೈನಲ್ಲಿರುವ ಅತೃಪ್ತ ಶಾಸಕರ ಗುಂಪಿಗೆ ಭಾನುವಾರವೇ ಸೇರಿಸುವಲ್ಲಿ ಯಶಸ್ವಿಯಾದರು.

ಈ ಹಿನ್ನಡೆಯಿಂದ ಕಂಗಾಲಾದ ಕಾಂಗ್ರೆಸ್‌ ನಾಯಕರು ತಾಜ್ ವಿವಾಂತ ಹೋಟೆಲ್‌ನಲ್ಲಿ ಮೊಕ್ಕಾಂ ಮಾಡಿರುವ ಶಾಸಕರನ್ನು ಉಳಿಸಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದರು. ಹೋಟೆಲ್‌ಗೆ ದೌಡಾಯಿಸಿದ ನಾಯಕ ಸಿದ್ದರಾಮಯ್ಯ, ಶಾಸಕರೊಂದಿಗೆ ಚರ್ಚಿಸಿದರು. ಅದರ ಬೆನ್ನಲ್ಲೇ, ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್‌, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದಿನ ನಡೆ ಕುರಿತು ಚರ್ಚೆ ನಡೆಸಿದರು.

ADVERTISEMENT

ರಾಜೀನಾಮೆ ಕೊಟ್ಟಿರುವ ಬಿಟಿಎಂ ಲೇಔಟ್‌ನ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ, ನಿರ್ಧಾರದಿಂದ ಹಿಂದೆ ಸರಿಯುವಂತೆ ಒಪ್ಪಿಸುವ ನಿರ್ಣಯ ಈ ಸಭೆಯಲ್ಲೇ ನಡೆಯಿತು. ರೆಡ್ಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರೆ ಅವರ ಪುತ್ರಿ, ಜಯನಗರ ಶಾಸಕಿ ಸೌಮ್ಯಾರೆಡ್ಡಿ ರಾಜೀನಾಮೆ ಕೊಡುವುದಿಲ್ಲ. ರಾಜೀನಾಮೆ ಕೊಟ್ಟು, ಮುಂಬೈ ಸೇರಿಕೊಂಡಿರುವ ಬೆಂಗಳೂರು ಪ್ರತಿನಿಧಿಸುವ ಕಾಂಗ್ರೆಸ್‌ನ ಮೂವರು ಶಾಸಕರು ವಾಪಸ್ ಬರಬಹುದೆಂಬುದು ನಾಯಕರ ಚಿಂತನೆಯಾಗಿತ್ತು.

ಈ ಬೆನ್ನಲ್ಲೇ, ಖರ್ಗೆ, ಸಿದ್ದರಾಮಯ್ಯ, ವೇಣುಗೋಪಾಲ್‌, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರೆಲ್ಲ ರೆಡ್ಡಿ ಅವರ ಮನೆಗೆ ತೆರಳಿದರು. ಖರ್ಗೆಯವರ ಮಾತನ್ನು ಹಿಂದೆಲ್ಲ ತೆಗೆದು ಹಾಕದೇ ಇದ್ದ ರೆಡ್ಡಿ ಅವರು ಈ ಬಾರಿಯೂ ಹಾಗೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಾಯಕರದ್ದಾಗಿತ್ತು. ಖರ್ಗೆ ಅವರು ಪ್ರತ್ಯೇಕವಾಗಿ ಮೂರು ನಿಮಿಷ ರೆಡ್ಡಿ ಅವರ ಜತೆಗೆ ಮಾತುಕತೆಯಾಡಿದರು. ಅದಾದ ಬಳಿಕ ಖರ್ಗೆ, ಸಿದ್ದರಾಮಯ್ಯ, ವೇಣುಗೋಪಾಲ್ ಮನೆಯಿಂದ ಹೊರಬಂದರು. ಕುಮಾರಸ್ವಾಮಿ, ಶಿವಕುಮಾರ್ ಮತ್ತೂ ಒಂದು ಗಂಟೆ ಚರ್ಚಿಸಿದರು. ಆದರೆ, ತಮ್ಮ ನಿಲುವಿನಿಂದ ರೆಡ್ಡಿ ಅವರು ಹಿಂದೆ ಸರಿಯಲಿಲ್ಲ ಎನ್ನಲಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರೆಡ್ಡಿ, ‘ಅವರೆಲ್ಲ ದೊಡ್ಡವರು ಬರಬಾರದಿತ್ತು. ಕರೆದಿದ್ದರೆ ನಾನೇ ಹೋಗುತ್ತಿದ್ದೆ. ಸೋಮವಾರದ ಬಳಿಕ ನಿರ್ಧಾರ ಪ್ರಕಟಿಸುವೆ’ ಎಂದಷ್ಟೇ ಹೇಳಿದರು.

ವಿಶ್ವಾಸ ಮತ ಸಾಬೀತಿಗೆ ಬಿಜೆಪಿ ಪ‍ಟ್ಟು

ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ಕೂಟದ ನಾಯಕರ ನಡೆಗೆ ಪ್ರತಿತಂತ್ರ ಹೆಣೆದಿರುವ ಬಿಜೆಪಿ ನಾಯಕರು, ಸೋಮವಾರ ಪುನರಾರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಅಂದೇ ವಿಶ್ವಾಸ ಮತ ಸಾಬೀತುಪಡಿಸುವಂತೆ ಪಟ್ಟು ಹಿಡಿದು ಧರಣಿ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.

‘ಬೆಳಿಗ್ಗೆ ನಡೆಯಲಿರುವ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇದೇ ಬೇಡಿಕೆಯನ್ನು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮಂಡಿಸಲಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಒಪ್ಪದೇ ಇದ್ದರೆ ಕಲಾಪ ನಡೆಯಗೊಡದಂತೆ ಶಾಂತಿಯುತ ಹೋರಾಟ ನಡೆಸುವ ದಾರಿ ಹಿಡಿಯಲಿದ್ದೇವೆ’ ಎಂದು ಪಕ್ಷದ ಹಿರಿಯ ಶಾಸಕರೊಬ್ಬರು ತಿಳಿಸಿದರು.

‘ಆಡಳಿತ ಪಕ್ಷದ ನಾಯಕರು ನಿಮ್ಮನ್ನು ಕೆರಳಿಸಿ, ಗಲಾಟೆಗೆ ಪ್ರಚೋದಿಸಲು ಮುಂದಾಗಬಹುದು. ಆಗ ತಾಳ್ಮೆ ಕಳೆದುಕೊಳ್ಳಬೇಡಿ. ನಮ್ಮ ನಡೆ ಅತಿರೇಕಕ್ಕೆ ಹೋಗುವುದನ್ನೇ ಕಾಯುತ್ತಿರುವ ಮೈತ್ರಿ ಕೂಟದ ನಾಯಕರು ಸದನ ನಡೆಯುವವರೆಗೆ ಕೆಲವರನ್ನು ಕಲಾಪದಿಂದ ಅಮಾನತು ಮಾಡಿ ಸರ್ಕಾರ ಉಳಿಸಿಕೊಳ್ಳುವ ದಾರಿ ಕಂಡುಕೊಳ್ಳಬಹುದು. ಈ ವಿಷಯದಲ್ಲಿ ಎಚ್ಚರವಹಿಸಿ ಎಂದು ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ’ ಎಂದೂ ಅವರು ವಿವರಿಸಿದರು.

ಮೈತ್ರಿಯ ಲೆಕ್ಕಾಚಾರವೇನು?

ರಾಜೀನಾಮೆ ಕೊಟ್ಟ ಶಾಸಕರ ಅರ್ಜಿ ಹಾಗೂ ಸಭಾಧ್ಯಕ್ಷರ ಅರ್ಜಿಗಳ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಇನ್ನೇನು ಅಸಾಧ್ಯ ಎಂಬ ಕ್ಷಣದವರೆಗೂ ಸರ್ಕಾರವವನ್ನು ಉಳಿಸಿಕೊಳ್ಳುವ ಯತ್ನವನ್ನು ಶತಾಯಗತಾಯ ಮುಂದುವರಿಸುವುದು ‘ದೋಸ್ತಿ’ ನಾಯಕರ ಲೆಕ್ಕಾಚಾರ.

‘ಅನರ್ಹತೆಯ ಅಸ್ತ್ರ ಬಳಸಿ ಶಾಸಕರನ್ನು ವಾಪಸ್ ಕರೆಸುವುದು. ವಿಶ್ವಾಸ ಸಾಬೀತುಪಡಿಸಲು ಬೇಕಾದ ತಂತ್ರಗಾರಿಕೆ ಹೆಣೆಯವುದು. ಅವೆಲ್ಲವೂ ಕೈ ಕೊಟ್ಟರೆ ಅಂತಿಮವಾಗಿ ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿ, ಸರ್ಕಾರ ಪತನಕ್ಕೆ ಬಿಜೆಪಿ ನಡೆಸಿದ ‘ಆಪರೇಷನ್‌’ಗಳನ್ನು ಸಾದ್ಯಂತ ವಿವರಿಸಿ, ಕೇಂದ್ರದ ಬಿಜೆಪಿ ಸರ್ಕಾರವನ್ನು ಬೈದು ರಾಜೀನಾಮೆ ಕೊಟ್ಟು ಹೊರನಡೆಯುವುದು ಮುಖ್ಯಮಂತ್ರಿ ಮತ್ತು ಮೈತ್ರಿ ನಾಯಕರ ಚಿಂತನೆಯಾಗಿದೆ’ ಎಂದು ಮೂಲಗಳು ಹೇಳಿವೆ.

ಅತೃಪ್ತ 12 ಶಾಸಕರ ಒಗ್ಗಟ್ಟು?

ಸರ್ಕಾರ ಉಳಿಸಲು ‘ದೋಸ್ತಿ’ ನಾಯಕರು ಹರಸಾಹಸ ಪಡುತ್ತಿದ್ದರೆ, ಸರ್ಕಾರ ಬೀಳಿಸಲೇಬೇಕು ಎಂದು ಹಟಕ್ಕೆ ಬಿದ್ದು ಮುಂಬೈ ಸೇರಿರುವ 12 ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

‘ನಮ್ಮಲ್ಲಿ ಗುಂಪುಗಳಿಲ್ಲ. ಕಾಂಗ್ರೆಸ್‌ನ ಯಾವ ನಾಯಕರ ಜತೆಗೂ ಮಾತುಕತೆ ನಡೆಸುವುದಿಲ್ಲ. ನಮ್ಮ ನಿರ್ಧಾರ ಅಚಲ’ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

‘ನಾನು ರಾಜೀನಾಮೆ ವಾಪಸ್ ಪಡೆಯುವುದಿಲ್ಲ’ ಎಂದು ಹೇಳಿದ ಎಂ.ಟಿ.ಬಿ. ನಾಗರಾಜ್‌, ‘ಯಾರೂ ಬೆಂಗಳೂರಿಗೆ ಹೋಗುವುದಿಲ್ಲ. ಕೆ.ಸುಧಾಕರ್ ಸಹ ದೆಹಲಿಯಿಂದ ಬಂದು ನಮ್ಮನ್ನು ಸೇರಿಕೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.