ಆರ್. ಅಶೋಕ
ಬೆಂಗಳೂರು: ‘ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಕ್ರಮ, ಅವ್ಯವಹಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಉಪಲೋಕಾಯುಕ್ತರ ಹೇಳಿಕೆ ಸಾಬೀತು ಮಾಡುವಂತೆ ಸರ್ಕಾರಿ ಶಾಲೆಗಳ ಸಾಮಗ್ರಿ ಖರೀದಿ ಅವ್ಯವಹಾರ ಬಯಲಿಗೆ ಬಂದಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸರ್ಕಾರಿ ಶಾಲೆಗಳಿಗೆ ಖರೀದಿ ಮಾಡಿರುವ ಲ್ಯಾಪ್‌ಟಾಪ್, ಎಲ್‌ಇಡಿ ಪ್ರೊಜೆಕ್ಟರ್, ಯುಪಿಎಸ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮ ಉಲ್ಲಂಘನೆ ಮಾಡಿ, ಅವ್ಯವಹಾರ ನಡೆಸಿರುವ ವಿಷಯ ಲೋಕಾಯುಕ್ತ ದಾಳಿಯಲ್ಲಿ ಬಯಲಾಗಿದೆ. ಸಿದ್ದರಾಮಯ್ಯ ಸಂಪುಟ ‘ಆಲಿ ಬಾಬಾ–34 ಕಳ್ಳರ ಕಥೆ’ಯಾಗಿದೆ’ ಎಂದು ದೂರಿದ್ದಾರೆ.
‘ದಿನಕ್ಕೊಂದು ಹಗರಣ, ದಿನಕ್ಕೊಂದು ಅಕ್ರಮ, ದಿನಕ್ಕೊಂದು ಅವ್ಯವಹಾರ. ದಿನಬೆಳಗಾದರೆ ಇವನ್ನೆಲ್ಲ ನೋಡಿ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕದ ಜನರು ರೋಸಿ ಹೋಗಿದ್ದಾರೆ. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಲಿ’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.