ADVERTISEMENT

ಸ್ತಬ್ಧಚಿತ್ರಗಳ ಹೆಸರಲ್ಲಿ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 11:54 IST
Last Updated 19 ಜನವರಿ 2022, 11:54 IST
   

ಬೆಂಗಳೂರು: ಸ್ತಬ್ಧಚಿತ್ರವನ್ನು ಏಕೆ ತಿರಸ್ಕರಿಸಲಾಗಿದೆ ಎಂದು ಆಯಾ ರಾಜ್ಯಗಳಿಗೆ ಕೇಂದ್ರ ರಕ್ಷಣಾ ಇಲಾಖೆಯೇ ಸ್ಪಷ್ಟಪಡಿಸಿದೆ ಎಂದು ರಾಜ್ಯ ಬಿಜೆಪಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅವರ ಟೀಕೆಗೆ ಉತ್ತರಿಸಿದೆ.

ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಟ್ಯಾಬ್ಲೊಗಳಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವಕಾಶ ನಿರಾಕರಿಸಿರುವುದು ಮತ್ತು ಆ ಕುರಿತು ಬಿಜೆಪಿ ನಾಯಕರು ನೀಡಿರುವ ಸ್ಪಷ್ಟನೆಗಳ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ‘ಪ್ರಜಾವಾಣಿ’ ಹಾಗೂ ಇತರ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ಸರಣಿ ಟ್ವೀಟ್‌ ಮಾಡಿರುವಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

‘ನಾರಾಯಣ ಗುರು, ಸುಭಾಷ್‌ ಚಂದ್ರ ಬೋಸ್ ಮಾತ್ರವಲ್ಲ, ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಕನಕ, ಕಬೀರ ಸೇರಿದಂತೆ ಈ ನೆಲದ ನಿಜ ಸಮಾಜ ಸುಧಾರಕರನ್ನು ಕೋಮುವಾದಿ-ಜಾತಿವಾದಿ ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತಾ ನಾಟಕವಾಡುತ್ತದೆ. ಈ ಆತ್ಮವಂಚನೆಯನ್ನು ನಿಲ್ಲಿಸಿ’ ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದರು.

ADVERTISEMENT

ಇದಕ್ಕೆ ಕೂ ಮೂಲಕ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಸ್ತಬ್ಧಚಿತ್ರವನ್ನು ಏಕೆ ತಿರಸ್ಕರಿಸಲಾಗಿದೆ ಎಂದು ಆಯಾ ರಾಜ್ಯಗಳಿಗೆ ಕೇಂದ್ರ ರಕ್ಷಣಾ ಇಲಾಖೆಯೇ ಸ್ಪಷ್ಟಪಡಿಸಿದೆ. ಇಷ್ಟರ ಮೇಲೂ ಸಿದ್ದರಾಮಯ್ಯ ಅವರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಅನಗತ್ಯ ಕಂಠಶೋಷಣೆಗೆ ನಾವ್ಯಾರೂ ಹೊಣೆಗಾರರಲ್ಲ ಎಂದಿದೆ.

ಈ ವರ್ಷವೂ ನಮ್ಮ ರಾಜ್ಯದ ಸ್ಥಬ್ದಚಿತ್ರ ಆಯ್ಕೆಯಾಗಿರುವುದಕ್ಕೆ ಸಿದ್ದರಾಮಯ್ಯ ಅವರು ಸಂತಸಪಡಬೇಕು. ಅದನ್ನು ಬಿಟ್ಟು ಅನಗತ್ಯ ವಿಚಾರಗಳನ್ನು ಹಿಡಿದುಕೊಂಡು ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡಲು ಬೇರೆ ವೇದಿಕೆ ನೋಡಿಕೊಳ್ಳಿ. ಮಾಧ್ಯಮದಲ್ಲಿ ಸುದ್ದಿಯಲ್ಲಿರಬೇಕು ಎನ್ನುವ ಹುಚ್ಚಾಟಕ್ಕೆ ನಾರಾಯಣ ಗುರುಗಳ ಹೆಸರು ಬಳಸಿಕೊಳ್ಳಬೇಡಿ ಎಂದು ಕಿಡಿ ಕಾರಿದೆ.

ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಆಗೇನಾದರೂ ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿದೆ ಎಂದು ಸ್ಥಬ್ದಚಿತ್ರವನ್ನು ಕೇಂದ್ರ ಆಯ್ಕೆ ಸಮಿತಿ ನಿರಾಕರಿಸಿತ್ತೇ? ಆಗಲೂ ನಮ್ಮ ರಾಜ್ಯ ಆಯ್ಕೆ ಆಗಿತ್ತಲ್ಲವೇ? ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.